ಹತ್ಯೆ ಆರೋಪಿ ಬಾಲಕನ ಜಾಮೀನು ಅರ್ಜಿ ತಳ್ಳಿಹಾಕಿದ ಸುಪ್ರೀಂ

Update: 2018-07-20 14:37 GMT

ಹೊಸದಿಲ್ಲಿ, ಜು.20: ಗುರ್ಗಾಂವ್‌ನ ಖಾಸಗಿ ಶಾಲೆಯಲ್ಲಿ ಕಳೆದ ವರ್ಷ 7ರ ಹರೆಯದ ಹುಡುಗನನ್ನು ಹತ್ಯೆ ಮಾಡಿದ ಬಾಲ ಆರೋಪಿ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.

ಹತ್ಯೆಯಾದ ಬಾಲಕ ಮತ್ತು ಹತ್ಯೆ ಮಾಡಿದ ಬಾಲಕ ಇಬ್ಬರೂ ಗುರ್ಗಾಂವ್‌ನ ಭೋಂಡ್ಸಿ ಎಂಬಲ್ಲಿರುವ ಒಂದೇ ಶಾಲೆಯ ವಿದ್ಯಾರ್ಥಿಯಾಗಿದ್ದರು. ಕಳೆದ ವರ್ಷದ ಸೆ.8ರಂದು 7 ವರ್ಷದ ಬಾಲಕನ ಶವ ಶಾಲೆಯ ಶೌಚಾಲಯದಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಘಟನೆಯ ತನಿಖೆ ನಡೆಸಿದ್ದ ಸಿಬಿಐ, ಅದೇ ಶಾಲೆಯ ವಿದ್ಯಾರ್ಥಿಯಾಗಿದ್ದ 16ರ ಹರೆಯದ ಆರೋಪಿ ಬಾಲಕ ಶಾಲೆಯ ಪರೀಕ್ಷೆ ಮುಂದೂಡಬೇಕು ಹಾಗೂ ನಿಗದಿಯಾಗಿದ್ದ ರಕ್ಷಕ-ಶಿಕ್ಷಕರ ಸಭೆ ರದ್ದಾಗಬೇಕೆಂಬ ಉದ್ದೇಶದಿಂದ ಕೊಲೆ ಮಾಡಿದ್ದ ಎಂದು ಆರೋಪಪಟ್ಟಿ ದಾಖಲಿಸಿತ್ತು.

ಪ್ರಕರಣದ ತನಿಖೆ ನಡೆಸಿದ್ದ ಸೆಷನ್ಸ್ ಕೋರ್ಟ್, ಕೊಲೆ ಪ್ರಕರಣದಲ್ಲಿ ಆರೋಪಿ ಬಾಲಕನನ್ನು ವಯಸ್ಕ ಎಂದು ಪರಿಗಣಿಸಿ ತನಿಖೆ ನಡೆಸಲು ಸೂಚಿಸಿತ್ತು ಮತ್ತು ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಳ್ಳಿಹಾಕಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಸಿಬಿಐ ನಿಗದಿತ ಅವಧಿಯಾದ 60 ದಿನದೊಳಗೆ ತನಿಖೆ ಮುಗಿಸಲು ವಿಫಲವಾಗಿರುವ ಕಾರಣ ಶಾಸನಬದ್ಧ ಜಾಮೀನು ನೀಡುವಂತೆ ಆರೋಪಿ ಪರ ವಕೀಲರು ಅರ್ಜಿಯಲ್ಲಿ ಕೋರಿದ್ದರು. ಆದರೆ ಐಪಿಸಿಯ ಸೆಕ್ಷನ್ 302ರಡಿ ಇದೊಂದು ಘೋರ ಅಪರಾಧವಾಗಿದೆ ಮತ್ತು ತನಿಖೆಗೆ 90 ದಿನ ನಿಗದಿಗೊಳಿಸಲಾಗಿದೆ, 60 ದಿನಗಳಲ್ಲ ಎಂದು ತಿಳಿಸಿದ ನ್ಯಾಯಮೂರ್ತಿಗಳಾದ ಆರ್.ಎಫ್.ನಾರಿಮನ್ ಮತ್ತು ಇಂದು ಮಲ್ಹೋತ್ರ ಅವರಿದ್ದ ನ್ಯಾಯಪೀಠ ಜಾಮೀನು ಅರ್ಜಿಯನ್ನು ತಳ್ಳಿಹಾಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News