ರಸ್ತೆ ಹೊಂಡದಿಂದ ಆಗುವ ಅಪಘಾತ: ಸುಪ್ರೀಂ ಆತಂಕ

Update: 2018-07-20 16:50 GMT

ಹೊಸದಿಲ್ಲಿ, ಜು.20: ದೇಶದಾದ್ಯಂತ ರಸ್ತೆ ಹೊಂಡದ ಕಾರಣ ಅಪಘಾತ ಸಂಭವಿಸಿ ಮೃತಪಡುವ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಅಪಘಾತದಿಂದ ಸಂಭವಿಸುವ ಸಾವಿನ ಸಂಖ್ಯೆ ಭಯೋತ್ಪಾದಕರ ದಾಳಿಯಲ್ಲಿ ಮೃತಪಡುವವರಿಗಿಂತ ಅಧಿಕವಾಗಿರುವುದು ಗಮನಾರ್ಹ ಎಂದು ತಿಳಿಸಿದೆ.

ರಸ್ತೆ ಹೊಂಡದಿಂದ ಆಗುತ್ತಿರುವ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ವಿಪರೀತವಾಗಿದ್ದು ಈ ವಿಷಯದ ಕುರಿತು ರಸ್ತೆ ಸುರಕ್ಷತೆಗಾಗಿನ ಸುಪ್ರೀಂಕೋರ್ಟ್‌ನ ಸಮಿತಿ ಗಮನ ಹರಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳಾದ ಮದನ್ ಬಿ.ಲೋಕುರ್ ಮತ್ತು ದೀಪಕ್ ಗುಪ್ತಾ ಅವರನ್ನೊಳಗೊಂಡಿರುವ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ. ಇದೊಂದು ಭಯಹುಟ್ಟಿಸುವ, ಬಹಳ ಗಂಭೀರವಾದ ವಿಷಯವಾಗಿದ್ದು ರಸ್ತೆ ಹೊಂಡದಿಂದ ಆಗುವ ಅಪಘಾತದಲ್ಲಿ ಜೀವ ಕಳೆದುಕೊಳ್ಳುವವರ ಕುಟುಂಬದವರಿಗೆ ಪರಿಹಾರ ಪಡೆಯಲು ಹಕ್ಕು ಇದೆ ಎಂದು ನ್ಯಾಯಪೀಠ ತಿಳಿಸಿತಲ್ಲದೆ, ರಸ್ತೆ ಸುರಕ್ಷತೆಗಾಗಿನ ಸಮಿತಿಗೆ ಎರಡು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ದೇಶದಾದ್ಯಂತ ರಸ್ತೆ ಸುರಕ್ಷತೆ ವಿಷಯದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿದ್ದ ವಿಚಾರಣೆ ಸಂದರ್ಭ ರಸ್ತೆ ಹೊಂಡದಿಂದ ಆಗುವ ಅಪಘಾತದ ಬಗ್ಗೆ ಚರ್ಚೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News