ಮುಟ್ಟಾಗುವ ಮಹಿಳೆಯರು ಶಬರಿಮಲೆ ಪ್ರವೇಶಿಸುವುದು ನಿಷಿದ್ಧ: ದೇವಸ್ವಂ ಮಂಡಳಿ

Update: 2018-07-20 17:11 GMT

ಹೊಸದಿಲ್ಲಿ, ಜು. 20: ಶಬರಿಮಲೆಯಲ್ಲಿ ಇರುವ ದೇವರ ಸ್ವರೂಪದ ಕಾರಣಕ್ಕೆ ಋತುಚಕ್ರ ಇರುವ ಮಹಿಳೆಯರಿಗೆ ಒಳಗಡೆ ಪ್ರವೇಶ ನಿರಾಕರಿಸಲಾಗಿದೆ ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಶುಕ್ರವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.

ಕೇರಳದಲ್ಲಿರುವ ಶಬರಿಮಲೆ ದೇವಾಲಯಕ್ಕೆ ಪುರುಷರಂತೆ ಮಹಿಳೆಯರಿಗೂ ಪ್ರವೇಶಿಸುವ ಹಾಗೂ ಪ್ರಾರ್ಥನೆ ಮಾಡುವ ಅವಕಾಶ ಇದೆ ಎಂದು ಸುಪ್ರೀಂ ಕೋರ್ಟ್ ಹೇಳಿದ ಎರಡು ದಿನಗಳ ಬಳಿಕ ಮಂಡಳಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ‘‘ಈ ಸಂಪ್ರದಾಯ ಇರುವ ಜಗತ್ತಿನ ಏಕೈಕ ದೇವಾಲಯ ಇದಾಗಿದೆ. ಮೂರ್ತಿ ಪವಿತ್ರವಾಗಿರಬೇಕು ಎಂಬುದು ಭಕ್ತರ ಸಮಷ್ಠಿ ನಂಬಿಕೆ. ಇದು ಮಹಿಳೆಯರು ಶುದ್ಧವಾಗಿರಬೇಕು ಎಂದು ಹೇಳುತ್ತಿರುವುದು ಅಲ್ಲ.’’ ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ಎಂದು ಎಂದು ದೇವಾಲಯ ಮಂಡಳಿ ಪರವಾಗಿ ನ್ಯಾಯಾಲಯದಲ್ಲಿ ಹಾಜರಾಗಿದ್ದ ಹಿರಿಯ ನ್ಯಾಯವಾದಿ ಅಭಿಷೇಕ್ ಸಿಂಘ್ವಿ ಹೇಳಿದರು.

 ಇಲ್ಲಿನ ದೇವರು ನೈಷ್ಠಿಕ ಬ್ರಹ್ಮಾಚಾರಿ. ಈ ಕಾರಣದಿಂದ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡುತ್ತಿಲ್ಲ ಎಂದು ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ದೀಪಕ್ ಮಿಶ್ರಾ, ಮಹಿಳೆಯರಿಗೆ ಶಬರಿಮಲೆ ಬಗ್ಗೆ ನಂಬಿಕೆ ಇದೆ. ಹಲವು ಜಗನ್ನಾಥ ದೇವಾಲಯಗಳಿವೆ. ಆದರೆ, ಪುರಿ ದೇವಾಲಯಕ್ಕೆ ಅಸಂಖ್ಯಾತ ಭಕ್ತರು ತೆರಳುತ್ತಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಂಘ್ವಿ, ಶಬರಿಮಲೆ ದೇವರ ಬಗ್ಗೆ ನಂಬಿಕೆ ಇರುವವರು ಸಂಪ್ರದಾಯಕ್ಕೆ ಗೌರವ ನೀಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News