ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ದಾಖಲಿಸಲು ನಿರ್ಲಕ್ಷ ಸಲ್ಲದು : ಜಿಲ್ಲಾಧಿಕಾರಿ ಪ್ರಿಯಾಂಕ

Update: 2018-07-20 18:31 GMT

ಉಡುಪಿ, ಜು.20: ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಿಕೊಳ್ಳುವಲ್ಲಿ ಪೊಲೀಸರು ನಿರ್ಲಕ್ಷ್ಯ ತೋರಿದ ಕುರಿತು ದೂರು ಬಂದಲ್ಲಿ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಲು ನೇರವಾಗಿ ಗೃಹ ಇಲಾಖೆಗೆ ಸೂಚಿಸಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಮಿತಿಯ ವಿವಿಧ ಸಮಿತಿಗಳ ಅಧ್ಯಕ್ಷತೆವಹಿಸಿ ಅವರು ಮಾತನಾಡುತಿದ್ದರು.

ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ದೂರು ನೀಡಲು ಸಂಬಂದಪಟ್ಟ ಪೊಲೀಸ್ ಠಾಣೆಗೆ ತೆರಳಿದರೆ, ದೂರು ದಾಖಲಿಸುವಲ್ಲಿ ನಿರ್ಲಕ್ಷ್ಯ ತೋರುತ್ತಿ ದ್ದಾರೆ ಎಂದು ಮಹಿಳಾ ಸಾಂತ್ವನ ಕೇಂದ್ರದ ಸದಸ್ಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರದಲ್ಲಿ ದೂರು ದಾಖಲಿಸಿ, ಸಂತ್ರಸ್ಥರಿಗೆ ನ್ಯಾಯ ಒದಗಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿ, ಇಲ್ಲವಾದಲ್ಲಿ ಸಂಬಂದಪಟ್ಟ ಪೊಲೀಸರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಗೃಹ ಇಲಾಖೆಗೆ ಪತ್ರಬರೆಯುವುದಾಗಿ ಎಚ್ಚರಿಕೆ ನೀಡಿದರು.

ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ, ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಾಂತ್ವನ ಕೇಂದ್ರದ ಸಿಬ್ಬಂದಿಗಳಿಗೆ ನೀಡುವ ವೇತನವನ್ನು ಹೆಚ್ಚಳ ಮಾಡುವ ಕುರಿತಂತೆ ಇಲಾಖೆಗೆ ಪತ್ರ ಬರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಗ್ರೇಸಿ ಗೊನ್ಸಾಲ್ವಿಸ್ ಅವರಿಗೆ ಜಿಲ್ಲಾಧಿಕಾರಿ ಸೂಚಿಸಿದರು.

ಉಡುಪಿಯಲ್ಲಿ ಸಾಂತ್ವನ ಯೋಜನೆಯಡಿ ಜನವರಿಯಿಂದ ಜೂನ್‌ವರೆಗೆ ಒಟ್ಟು 181 ಪ್ರಕರಣ ದಾಖಲಾಗಿದ್ದು, 65 ಇತ್ಯರ್ಥ ಪಡಿಸಲಾಗಿದೆ. 116 ಪ್ರಕರಣ ಬಾಕಿ ಇವೆ. ಕಾರ್ಕಳದಲ್ಲಿ 80 ಪ್ರಕರಣ ದಾಖಲಾಗಿದ್ದು, 25 ಇತ್ಯರ್ಥ ಪಡಿಸಲಾಗಿದ್ದು 55 ಬಾಕಿ ಇವೆ. ಕುಂದಾಪುರದಲ್ಲಿ 91 ಪ್ರಕರಣ ದಾಖಲಾಗಿ 34 ಇತ್ಯರ್ಥ ಪಡಿಸಿ 57 ಬಾಕಿ ಇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಾಂತ್ವನ ಯೋಜನೆಯ ಕುರಿತು ಜಿಲ್ಲೆಯ ಮಹಿಳಾ ಪದವಿ ಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಹಯೋಗ ದಲ್ಲಿ ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಸಖಿ ಒನ್ ಸ್ಟಾಪ್ ಸೆಂಟರ್‌ನಲ್ಲಿ ಜನವರಿಯಿಂದ ಜೂನ್‌ವರೆಗೆ ಒಟ್ಟು 88 ಪ್ರಕರಣಗಳು ದಾಖಲಾಗಿದ್ದು, 22ನ್ನು ಇತ್ಯರ್ಥ ಪಡಿಸಲಾಗಿದೆ. 2 ಸಮಾಲೋಚನೆಗೆ ಮತ್ತು 64 ನ್ಯಾಯಾಲಯದಲ್ಲಿ ಬಾಕಿ ಇವೆ. ವರದಕ್ಷಿಣೆ ನಿಷೇದ ಕಾಯ್ದೆಯಡಿ ಒಟ್ಟು 10 ಪ್ರಕರಣಗಳಿದ್ದು, 3 ನ್ಯಾಯಾಲಯದಲ್ಲಿ ಮತ್ತು 7 ಪೊಲೀಸ್ ಇಲಾಖೆಯಲ್ಲಿ ಬಾಕಿ ಇವೆ. ಸ್ಥೈರ್ಯ ನಿಧಿ ಯೋಜನೆಯಡಿ ಇಬ್ಬರು ಫಲಾನುಭವಿಗಳಿಗೆ 50000ರೂ. ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆದ ಯಾವುದೇ ಪ್ರಕರಣ ವರದಿಯಾಗಿಲ್ಲ. ಸಾಮೂಹಿಕ ವಿವಾಹ ನಡೆಯುವ ಸಂದರ್ಭದಲ್ಲಿ ಶಿಶು ಅಭಿವೃದ್ದಿ ಯೋಜನಾಧಿ ಕಾರಿಗಳು ಮತ್ತು ತಹಶೀಲ್ದಾರರು ಸ್ಥಳಕ್ಕೆ ತರಳಿ ವಯಸ್ಸಿನ ದೃಢೀಕರಣ ಮಾಡುತ್ತಾರೆ. ಬಾಲ್ಯ ವಿವಾಹ ನಿಷೇಧದ ಕುರಿತಂತೆ ಧಾರ್ಮಿಕ ಮುಖಂಡರು, ವಿವಿಧ ಕಲ್ಯಾಣ ಮಂಟಪದ ವ್ಯವಸ್ಥಾಪಕರಿಗೆ ತರಬೇತಿ ನೀಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧಿಕಾರಿಗಳು ತಿಳಿಸಿದರು.

ಸಭೆಯಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಲತಾ, ಜಿಪಂ ಸಿಇಓ ಶಿವಾನಂದ ಕಾಪಶಿಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಸಾಂತ್ವನ ಕೇಂದ್ರದ ಮುಖ್ಯಸ್ಥರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News