ಮಠದಬೆಟ್ಟು: ಕೃಷಿಭೂಮಿಗೆ ನುಗ್ಗಿದ ನೀರು, ಅಪಾರ ನಷ್ಟ

Update: 2018-07-20 18:42 GMT

ಬಂಟ್ವಾಳ, ಜು. 20: ನೇತ್ರಾವತಿಗೆ ಶಂಭೂರುನಲ್ಲಿ ನಿರ್ಮಿಸಲಾದ ಎಎಂಆರ್ ಡ್ಯಾಂನಲ್ಲಿ ನೀರು ನಿಲುಗಡೆಯಿಂದ ಸರಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಪಾಡಿ ಮಠದಬೆಟ್ಟು ಪರಿಸರದಲ್ಲಿ ಕೃಷಿಭೂಮಿಯಲ್ಲಿ ನೀರು ನಿಂತು ಅಪಾರ ಪ್ರಮಾಣದ ನಷ್ಟ ಉಂಟಾಗುವ ಭೀತಿ ರೈತರನ್ನು ಕಂಗಾಲಾಗಿಸಿದೆ.

ಮಠದಬೆಟ್ಟುವಿನ ಹರೀಶ್ ಎಂಬವರ ಸಹಿತ ಹಲವಾರು ಮಂದಿ ರೈತರ ಅಡಿಕೆ ತೋಟದಲ್ಲಿ ಕಳೆದ 18 ದಿನಗಳಿಂದ ನೀರು ನಿಂತು ಅಡಿಕೆ ತೋಟ ಕೊಳೆಯುವ ಹಂತಕ್ಕೆ ತಲುಪಿದೆ. ಹರೀಶ್ ಅವರ ತೋಟದ 800 ವಿವಿಧ ಪ್ರಾಯದ ಅಡಿಕೆ ಸಸಿ, ಬಾಳೆಗಿಡಗಳು, ಗದ್ದೆ ನೀರಿನಿಂದ ಮುಳುಗಡೆಯಾಗಿದ್ದು, ಸರಪಾಡಿ ಪರಿಸರದಲ್ಲೂ ಕೆಲವರ ಕೃಷಿ ಭೂಮಿ ಮುಳುಗಡೆಯಾಗಿದೆ ಎಂದು ಅವರು ದೂರಿದ್ದಾರೆ.

ತೋಟ ಹಾಗೂ ಮುಳುಗಡೆಯಾದ ಪ್ರದೇಶದಲ್ಲಿ ತೋಡುಗಳು ನೀರಿನಿಂದ ಆವೃತವಾಗಿರುವುದರಿಂದ ತೋಡು ದಾಟಿ ತಮ್ಮ ಗದ್ದೆ,ತೋಟಗಳಿಗೆ ಸಂಪರ್ಕ ಸಾಧಿಸಲು ಅಸಾಧ್ಯವಾಗಿ ಕೃಷಿಕಾರ್ಯಗಳು ಸ್ಥಗಿತಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಪರಿಸ್ಥಿತಿ ಉಂಟಾಗಲು ಶಂಭೂರು ಎಎಂಆರ್ ಅಣೆಕಟ್ಟು ಏರಿಕೆಯಾಗಿರುವುದೇ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದು, ಕಳೆದ 18ದಿನಗಳಿಂದ ಈ ರೀತಿ ನೀರಿನ ಮಟ್ಟ ಏರಿಕೆಯಾಗಿ ಕೃಷಿಭೂಮಿಯ ಗದ್ದೆ, ತೋಟಗಳಲ್ಲಿ ನೀರು ತುಂಬಿದೆ ಎಂದು ದೂರಲಾಗಿದೆ. 

ಅಣೆಕಟ್ಟಿನ ಈಗಿರುವ ಎತ್ತರವನ್ನು ಮತ್ತೆ ಮೂರು ಅಡಿಯಷ್ಟು ಏರಿಕೆ ಮಾಡಿರುವ ಅನುಮಾನ ವ್ಯಕ್ತಪಡಿಸಿರುವ ಸರಪಾಡಿ ಗ್ರಾಮಸ್ಥರು, ಇದರ ಪರಿಣಾಮವಾಗಿ ಕೃಷಿ ಭೂಮಿಯಲ್ಲಿ ನೀರು ನಿಲ್ಲಲು ಕಾರಣವಾಗಿದೆ ಎಂದು ಕೃಷಿಕರು ಆರೋಪಿಸಿದ್ದಾರೆ.

ಕೃಷಿಗೆ ಹಾನಿ: ಗುಡ್ಡ ಜರಿದು ಕೃಷಿಗೆ ಹಾನಿಯಾದ ಘಟನೆ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಮುಂಡಾಜೆ ಎಂಬಲ್ಲಿ ಶುಕ್ರವಾರ ನಡೆದಿದೆ.
ಕಳ್ಳಿಗೆ ನಿವಾಸಿ ನವೀನ ಚಂದ್ರ ಶೆಟ್ಟಿ, ಬಾಬು ಸಪಲ್ಯ, ಐತ್ತಪ್ಪ ಸಪಲ್ಯ ಎಂಬವರ ಕೃಷಿ ಭೂಮಿಗೆ ಹಾನಿಯಾಗಿದೆ.

ನಿನ್ನೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡಕುಸಿತಗೊಂಡು ತೋಡಿಗೆ ಮಣ್ಣು ಬಿದ್ದ ಪರಿಣಾಮ ನೀರು ಹರಿದು ಹೋಗಲು ಜಾಗವಿಲ್ಲದೆ ಹತ್ತಿರದ ಭತ್ತ, ಅಡಿಕೆ ತೋಟಕ್ಕೆ ನೀರು ನುಗ್ಗಿ ಸಾವಿರಾರು ರೂ. ನಷ್ಟ ಸಂಭವಿಸಿದೆ. 

ಮನೆಗಳಿಗೆ ಹಾನಿ: ಗಾಳಿ ಮಳೆಗೆ ವಿಟ್ಲ ಕಸ್ಬಾ ಗ್ರಾಮದ ಕೂಜಪ್ಪಾಡಿ ನಿವಾಸಿ ಜನಾರ್ಧನ ಮೂಲ್ಯ ಎಂಬವರ ಮನೆಯು ಜರಿದು ಬಿದ್ದಿದೆ. ಮನೆಯ ಒಳಗೆ ಯಾರೂ ಇಲ್ಲ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ.

ಅನಂತಾಡಿ ಗ್ರಾಮದಲ್ಲಿ ನಾಗಪ್ಪ ಎಂಬವರ ಮನೆಗೆ ಹಾನಿಯಾಗಿದ್ದು, ಇಲ್ಲಿನ ಸರಕಾರಿ ಶಾಲೆಯ ಆವರಣ ಗೋಡಯೂ ಕುಸಿದು ಬಿದ್ದು ನಷ್ಟ ಸಂಭವಿಸಿದೆ. ಕೊಳ್ನಾಡು ಗ್ರಾಮದ ಕುದ್ರಿಯ ಎಂಬಲ್ಲಿನ ಜಯಂತಿ ಎಂಬವರ ಮನೆ ಗುಡ್ಡ ಕುಸಿತದಿಂದ ಹಾನಿಯಾದ ಬಗ್ಗೆ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News