ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಆ.15ರಿಂದ ಸ್ವಯಂ ಚಾಲಿತ ದಾಖಲೀಕರಣ ವ್ಯವಸ್ಥೆ ಜಾರಿ: ಸಚಿವ ಖಾದರ್

Update: 2018-07-21 07:30 GMT

ಮಂಗಳೂರು, ಜು.21: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ಕಡತ ವಿಲೇವಾರಿಯಲ್ಲಿ ಆಗುತ್ತಿರುವ ಸಮಸ್ಯೆಯನ್ನು ಬಗೆಹರಿಸಲು ಆಗಸ್ಟ್ 15ರಿಂದ ಸ್ವಯಂಚಾಲಿತ ದಾಖಲೀಕರಣ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ನಗರಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರ್ಜಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ವ್ಯವಸ್ಥೆ ಇದಾಗಿದ್ದು, ಸಲ್ಲಿಸಿದ ಅರ್ಜಿ ಸಮರ್ಪಕವಾಗಿದ್ದರೆ ಒಂದು ವಾರದೊಳಗೆ ಅನುಮತಿ ಪತ್ರವನ್ನು ಒದಗಿಸಲಾಗುವುದು. ಇದೊಂದು ಕ್ರಾಂತಿಕಾರಿ ಹೆಜ್ಜೆ ಎಂದು ತಿಳಿಸಿದರು.

ಈ ಬಗ್ಗೆ ಈಗಾಗಲೇ ಸಾಫ್ಟ್‌ವೇರ್ ಕಂಪೆನಿ ಜತೆ ಮಾತುಕತೆ ನಡೆಸಲಾಗಿದೆ. ಇದಕ್ಕಾಗಿ 7.5 ಕೋಟಿ ರೂ. ಖರ್ಚಾಗಲಿದೆ. ಮನೆ ನಿರ್ಮಿಸಲು ಅರ್ಜಿ ಸಲ್ಲಿಸುವವರಿಗೆ ನಿಗದಿತ ಅವಧಿಯಲ್ಲಿ ಏಕಗವಾಕ್ಷಿ ಪದ್ಧತಿಯಡಿ ಕಡತ ವಿಲೇವಾರಿ ಆಗಲಿದ್ದು, ದೊಡ್ಡ ಯೋಜನೆಗಳಿಗೆ ವಿವಿಧ ಇಲಾಖೆಗಳಿಂದ ವಿವಿಧ ರೀತಿಯ ಅನುಮತಿಯನ್ನು ನಿಗದಿತ ಸಮಯದಲ್ಲಿ ಒದಗಿಸಲು ಕ್ರಮ ಆಗಬೇಕಿದೆ. ಒಂದು ಇಲಾಖೆಯ ಅನುಮತಿ ಪತ್ರವು ಒಂದು ವಾರದೊಳಗೆ ಲಭಿಸದಿದ್ದಲ್ಲಿ, ಆ ಇಲಾಖೆಯಿಂದ ಅನುಮತಿ ಲಭಿಸಿದೆ ಎಂದು ತಿಳಿಯಬೇಕಾಗುತ್ತದೆ. ಒಂದು ವೇಳೆ ಅದರಿಂದ ಮುಂದೇನಾದರೂ ಅಪಾಯ, ತೊಂದರೆ ಆದಲ್ಲಿ ಅದಕ್ಕೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಮಂಗಳೂರಿಗೆ ಸಂಬಂಧಿಸಿ ಪ್ರಥಮ ಹಂತದಲ್ಲಿ ಈ ವ್ಯವಸ್ಥೆ ಜಾರಿಯಾಗಲಿದ್ದು, ಮುಂದೆ ರಾಜ್ಯಕ್ಕೆ ಅನ್ವಯಿಸಲಾಗುವುದು ಎಂದು ಸಚಿವ ಖಾದರ್ ಹೇಳಿದರು.

ಮುಡಾದಲ್ಲಿ ಅನೇಕ ಸಮಸ್ಯೆಗಳಿವೆ. ಅಲ್ಲಿ ಸರಿಯಾಗಿ ಕೆಲಸ ಆಗುತ್ತಿಲ್ಲ. ಅರ್ಜಿ ವಿಲೇವಾರಿಗೆ ವಿಳಂಬ ಮಾಡಲಾಗುತ್ತದೆ. ಅಧಿಕಾರಿಗಳು ಮತ್ತು ಜನರ ಮಧ್ಯೆ ಮಧ್ಯವರ್ತಿಗಳು ಕೆಲಸ ಮಾಡುತ್ತಿದ್ದಾರೆ ಎಂಬ ಹಲವಾರು ದೂರುಗಳು ಬಂದಿವೆ. ಅದನೆಲ್ಲಾ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಆಗಸ್ಟ್ 4ರಂದು ಮುಡಾ ಕಚೇರಿಯಲ್ಲಿ ಮುಡಾ ಅದಾಲತ್ ಆಯೋಜಿಸಲಾಗಿದೆ. ಬೆಳಗ್ಗೆ 9:30ಕ್ಕೆ ಆರಂಭಗೊಳ್ಳುವ ಅದಾಲತ್‌ನಲ್ಲಿ ಜಿಲ್ಲಾಧಿಕಾರಿ, ಮುಡಾ ಆಯುಕ್ತರು ಹಾಗೂ ಇತರ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.

ಟೋಕನ್ ನೀಡಿ ಜನರ ಸಮಸ್ಯೆಯನ್ನು ಅಲ್ಲೇ ಪರಿಹರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಜಿಪಂ ಸದಸ್ಯೆ ಮಮತಾ ಗಟ್ಟಿ, ಮುಖಂಡರಾದ ಈಶ್ವರ ಉಳ್ಳಾಲ್, ಸದಾಶಿವ ಉಳ್ಳಾಲ್, ಸಂತೋಷ್ ಶೆಟ್ಟಿ, ಮೆಲ್ವಿನ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News