ಮಕ್ಕಳಲ್ಲಿ ವೈಜ್ಞಾನಿಕ ಸಂಶೋಧನೆ ಆಸಕ್ತಿಗಾಗಿ ಅಟಲ್ ಟಿಂಕರಿಂಗ್ ಜಾರಿ : ಸಂಜೀವ ಮಠಂದೂರು

Update: 2018-07-21 18:57 GMT

ಪುತ್ತೂರು,ಜು.21:ಸ್ಪರ್ಧಾತ್ಮಕ ಜಗತ್ತಿನಲ್ಲಿ ಭಾರತಕ್ಕೆ ಚೀನಾ ಬಹಳಷ್ಟು ಸವಾಲಡೊತ್ತಿದೆ. ಅಲ್ಲಿ ಮನೆ ಮನೆಯಲ್ಲೂ ಎಲೆಕ್ಟ್ರಾನಿಕ್ ಉತ್ಪನ್ನಗಳು ಉತ್ತಾದನೆಯಾಗುತ್ತಿದೆ. ಭಾರತದಲ್ಲೂ ಮನೆ ಮನೆಯಲ್ಲಿ ಎಲೆಕ್ಟ್ರಾನಿಕ್ ಸಾಮಾಗ್ರಿಗಳು ಉತ್ಪಾದನೆಯಾಗಬೇಕು. ಅದಕ್ಕಾಗಿ ತಂತ್ರಜ್ಞಾನಗಳು ಗ್ರಾಮೀಣ ಪ್ರದೇಶದ ಮನೆ ಮನೆಗೆ ವಿಸ್ತರಣೆಯಾಗಬೇಕು. ಪ್ರತಿ ಮನೆಮನೆಯಲ್ಲೂ ಎಲೆಕ್ಟ್ರಾನಿಕ್ ಉತ್ಪಾದನೆಗೆ ಪೂರಕವಾಗುವಂತೆ ಮಕ್ಕಳಲ್ಲಿಯೂ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿಯವರು ಅಟಲ್ ಟಿಂಕರಿಂಗ್ ಪ್ರಯೋಗಾಲಯವನ್ನು ಜಾರಿಗೊಳಿಸಿದ್ದಾರೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ಕೇಂದ್ರ ಸರಕಾರದ ನೀತಿ ಆಯೋಗದ ಪ್ರಾಯೋಜಕತ್ವದಲ್ಲಿ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಅಟಲ್ ಟಿಂಕರಿಂಗ್ ಪ್ರಯೋಗಾಲಯವನ್ನು ಶನಿವಾರ  ದರ್ಬೆ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನಕ್ಕೆ ಸಂಬಂಧಿಸಿ ಮಕ್ಕಳಲ್ಲಿ ಬಹಳಷ್ಟು ಪ್ರತಿಭೆಗಳಿವೆ. ಪ್ರತಿಭೆಗಳನ್ನು ಹೊರಹಾಕಲು ಪ್ರಧಾನಿಯವರು ಅಟಲ್ ಟಿಂಕರಿಂಗ್ ಯೋಜನೆ ಮುಖಾಂತರ 6ರಿಂದ 10ನೇ ತರಗತಿ ವರೆಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದಾರೆ. ಇದರ ಮೂಲಕ ವಿದ್ಯಾರ್ಥಿಗಳಿಗೆ ವೈಜ್ಞಾನಿಕವಾದ ಪರಿಕಲ್ಪಣೆ ನೀಡಿ, ವಿಜ್ಞಾನದ ಆಧುನಿಕ ಬೇಡಿಕೆಗಳು ಏನಿದೆ. ವಿಜ್ಞಾನವನ್ನು ಯಾವ ರೀತಿ ಬಳಕೆ ಮಾಡಿಕೊಳ್ಳಬಹುದು. ಅದಕ್ಕೆ ಪೂರಕವಾದ ಮೂಲಭೂತ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ತಿಳಿಸಲಾಗುತ್ತದೆ. ಇದರಿಂದಾಗಿ ಒಬ್ಬ ಸಾಮಾನ್ಯ ವ್ಯಕ್ತಿಗೂ ತಂತ್ರಜ್ಞಾನವನ್ನು ಬಳಸಿಕೊಳ್ಳಲು ಈ ಪ್ರಯೋಗಾಲಯ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಪ್ರಾಥಮಿಕ ಹಂತದಲ್ಲಿಯೇ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆಗಳಲ್ಲಿ ಭಾಗಿಯಾಗುವ ಮೂಲಕ ಮುಂದೆ ತಮ್ಮ ವೃತ್ತಿಗೆ ಪೂರಕವಾದ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲಿದೆ ಎಂದು ಹೇಳಿದರು.

ಆಶೀರ್ವಚನ ನೀಡಿದ ಕ್ಯಾಥೋಲಿಕ್ ಚರ್ಚ್‍ನ ಸಂಚಾಲಕ ಆ್ಯಂಟನಿ ಮೈಕಲ್ ಸೆರಾವೂ ಮಾತನಾಡಿ, ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಊಟ, ಪುಸ್ತಕ, ಸಮವಸ್ತ್ರ, ಸೇರಿದಂತೆ ಹಲವು ಸೌಲಭ್ಯಗಳನ್ನು ಸರಕಾರ ನೀಡುತ್ತಿದೆ. ಆದರೆ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಾಥಮಿಕ ಶಿಕ್ಷಣವೇ ಅಡಿಪಾಯವಾಗಿದ್ದರೂ ಶಾಲೆಗಳಿಗೆ ಶಿಕ್ಷಕರನ್ನು ನೇಮಕ ಮಾಡುವುದಿಲ್ಲ. ಪ್ರಾಥಮಿಕ ಹಂತ ಶಿಕ್ಷಣ ವಿದ್ಯಾರ್ಥಿಗಳಿಗೆ ಆವಶ್ಯಕವಾಗಿದ್ದು ತರಗತಿ ಒಂದು ಶಿಕ್ಷಕರಂತೆ ನೇಮಕವಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ಮುತುವರ್ಜಿ ವಹಿಸುವಂತೆ ಅವರು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ ಮಾತನಾಡಿ, ಮಕ್ಕಳಲ್ಲಿ ಮುಗ್ದತೆ, ಕುತೂಹಲಗಳಿರುವುದು ಸಹಜ. ವೈಜ್ಞಾನಿಕವಾಗಿ ಅವರ ಮನಸ್ಸಿನಲ್ಲಿಯೇ ಯೋಚನೆಗಳಿಗೆ ಬರುವ ಸಾಕಷ್ಟು ವಿಚಾರಗಳಿವೆ. ಇದಕ್ಕಾಗಿ ಪಠ್ಯೇತರ ಚಟುವಟಿಕೆಗಳ ಮುಖಾಂತರ ಮಕ್ಕಳಲ್ಲಿ ಸಹಜವಾಗಿರುವ ಕುತೂಹಲಗಳನ್ನು ಹೊರತರವುದೇ ಈ ಯೋಜನೆಯ ಉದ್ದೇಶ. ಇದರ ಮುಖಾಂತರ ಮಕ್ಕಳ ವೈಜ್ಞಾನಿಕ ಕುತೂಹಲಗಳನ್ನು ಕೆರಳಿಸಿ ಅವರನ್ನು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ ಅಧ್ಯಕ್ಷ ಮೀನಾಕ್ಷಿ ಶಾಂತಿಗೋಡು ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಹಂತದಲ್ಲೇ ವೈಜ್ಞಾನಿಕ ಆಸಕ್ತಿ ಮೂಡಿಸುವುದೇ ಅಟಲ್ ಟಿಂಕರಿಗ್ ಉದ್ದೇಶವಾಗಿದೆ. ಈ ಯೋಜನೆಯ ಮೂಲಕ ಆರನೇ ತರಗತಿಯಿಂದ 10ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಾಠದ ಜೊತೆಗೆ ವೈಜ್ಞಾನಿಕ ಸಂಶೋಶಧನೆಗೆ ಪ್ರೇರಣೆ ನೀಡಲಾಗುತ್ತದೆ ಎಂದರು.

ತಾ.ಪಂ ಅಧ್ಯಕ್ಷೆ ಭವಾನಿ ಚಿದಾನಂದ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರನ್ನು, ಸಹಪಾಠಗಳನ್ನು ಟೀಕೆ ಮಾಡುವುದು ಸರಿಯಲ್ಲ. ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಆವಶ್ಯಕ. ಅಟಲ್ ಟಿಂಕರಿಂಗ್ ಯೋಜನೆಯು ವಿದ್ಯಾರ್ಥಿಗಳ ಭವಿಷ್ಯಕ್ಕೆ ಪ್ರಯೋಜನವಾಗಲಿದೆ ಎಂದ ಹೇಳಿದರು. ಮಾೈದೇ ದೇವುಸ್ ಚರ್ಚ್‍ನ ಧರ್ಮಗುರು ಆಲ್ಫ್ರೆಡ್ ಜೆ.ಪಿಂಟೋ, ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್ ಸಂದರ್ಭೋಚಿತವಾಗಿ ಮಾತನಾಡಿದರು. 

ಶಾಸಕ ಸಂಜೀವ ಮಠಂದೂರು, ಅಟಲ್ ಟಿಂಕರಿಂಗ್ ಯೋಜನೆ ಪುತ್ತೂರಿಗೆ ತರುವಲ್ಲಿ ಸಹಕರಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಾಲೆಗೆ ಸವಲತ್ತುಗಳನ್ನು ಕೊಡುಗೆ ನೀಡಿದ ಸರಳಾ ಸಾಂತಪ್ಪ ರೈ, ಅಟಲ್ ಟಿಂಕರಿಂಗ್ ಅಳವಡಿಸಿದ ಬ್ರೆಸೆಂಟಾ ಟೆಕ್ನಾಲಜಿಯ ರವೀಂದ್ರರವರನ್ನು ಸನ್ಮಾನಿಸಲಾಯಿತು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಂಸ್ಥೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ಡಾ.ಸೂರ್ಯನಾರಾಯಣ, ಜತೆ ಕಾರ್ಯದರ್ಶಿ ಉಷಾಕಿರಣ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎನ್.ಕೆ ಜಗನ್ನಿವಾಸ ರಾವ್, ಚರ್ಚ್‍ಪಾಲನಾ ಸಮಿತಿ ಅಧ್ಯಕ್ಷ ಜೆ.ಪಿ ರೋಡ್ರಿಗಸ್, ದಾನಿ ಸರಳಾ ಸಾಂತಪ್ಪ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮುಖ್ಯಗುರು ಓಸ್ವಾಲ್ಡ್ ರೋಡ್ರಿಗಸ್ ಸ್ವಾಗತಿಸಿದರು. ಶಿಕ್ಷಕ ರಾಜಶೇಖರ್ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿ ನಾಯಕ ಮಹಮ್ಮದ್ ಶಾಹಿಲ್ ವಂದಿಸಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News