ಎಲ್ಲೂರು: ಸ್ಥಳೀಯ ಪಂಚಾಯತ್‌ಗೆ ಸಿಎಸ್‌ಆರ್ ನಿಧಿ ಶಾಸಕ ಲಾಲಾಜಿ ಆಗ್ರಹ

Update: 2018-07-22 07:39 GMT

ಪಡುಬಿದ್ರೆ, ಜು.22: ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಆದ್ಯತೆ ನೀಡಬೇಕು. ಯೋಜನೆ ವಿಸ್ತರಣೆಯಾಗುವ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಸಿಎಸ್‌ಆರ್ ನಿಧಿಯನ್ನು ಪಂಚಾಯತ್‌ಗೆ ನೀಡಬೇಕು ಎಂದು ಶಾಸಕ ಲಾಲಾಜಿ ಆರ್.ಮೆಂಡನ್ ಯುಪಿಸಿಎಲ್-ಅದಾನಿಗೆ ಒತ್ತಾಯಿಸಿದರು.

ಎಲ್ಲೂರು ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶನಿವಾರ ನಡೆದ ಗ್ರಾಮಸಭೆಯಲ್ಲಿ ಭಾಗವಹಿಸಿ ಪಂಚಾಯತ್ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಅದಾನಿ-ಯುಪಿಸಿಎಲ್ ಯೋಜನೆಯಿಂದ ತೊಂದರೆಗೊಳಗಾಗಿರುವುದರಿಂದ ಸುತ್ತಮುತ್ತಲಿನ ಪಂಚಾಯತ್‌ಗೆ ಮೊದಲು ಸ್ಥಳೀಯ ಗ್ರಾಮ ಪಂಚಾಯತ್‌ಗೆ ಆದ್ಯತೆ ನೀಡಬೇಕಿದ್ದು, ಈ ಬಗ್ಗೆ ಕಂಪೆನಿ ಪುನರ್ ಪರಿಶೀಲನೆ ನಡೆಸಬೇಕು ಎಂದು ಶಾಸಕ ಲಾಲಾಜಿ ಆರ್. ಮೆಂಡನ್ ಹೇಳಿದರು.

ಯುಪಿಸಿಎಲ್ ಅದಾನಿ ಸಮೂಹಕ್ಕೆ ಸೇರಿದ ನಂತರ ಸಿಎಸ್‌ಆರ್ ನಿಧಿಯನ್ನು ಯೋಜನಾ ಸುತ್ತಮುತ್ತಲಿನ ಗ್ರಾಮಗಳಿಗೆ ನೀಡುತ್ತಾ ಬಂದಿದೆ ಎಂದ ಅವರು, ಗ್ರಾಮದಲ್ಲಿ ಲಭ್ಯ ಜಾಗದಲ್ಲಿ ಅರ್ಹ ನಿವೇಶನರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳೂ ಜನರ ಬೇಡಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಬೇಕು ಎಂದರು.

ಮನೆ ಭೇಟಿ ಸಮೀಕ್ಷೆ ಆರಂಭಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಮೃತಪಟ್ಟವರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. 2018ರ ಜನವರಿಯಲ್ಲಿ 18 ವರ್ಷ ಪೂರ್ಣಗೊಂಡ ಹಾಗೂ 2019 ಜನವರಿಯಲ್ಲಿ 18 ವರ್ಷ ತುಂಬುವ ಹೊಸ ಮತದಾರರ ನೋಂದಣಿ ಪ್ರಕ್ರಿಯೆ ಚಾಲನೆಯಲ್ಲಿದೆ. ಪಡಿತರ ಚೀಟಿಯಲ್ಲಿ ಹೆಸರಿದ್ದು, ಮೃತಪಟ್ಟವರ ಹೆಸರು ಸ್ವಯಂ ಊರ್ಜಿತವಾಗಿ ರದ್ದುಗೊಳಿಸಲು ಕಂದಾಯ ಇಲಾಖೆ ಕ್ರಮ ಕೈಗೊಂಡಿದೆ ಎಂದು ಗ್ರಾಮಕರಣಿಕ ಅರುಣ್ ಕುಮಾರ್ ಮಾಹಿತಿ ನೀಡಿದರು.

ಗ್ರಾಮದಲ್ಲಿ ಸರಗಳ್ಳತನದಂತಹ ಪ್ರಕರಣಗಳು ಹೆಚ್ಚುತ್ತಿವೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥ ವಿಠಲ್ ಪೊಲೀಸರಿಗೆ ತಾಕೀತು ಮಾಡಿದರು.

ಇದಕ್ಕುತ್ತರಿಸಿದ ಪಡುಬಿದ್ರೆ ಪೊಲೀಸ್ ಠಾಣೆಯ ಎಎಸ್ಸೈ ಕೆ.ಜಯ ಈಗಾಗಲೇ ವಾರ್ಡ್‌ಗಳಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಜಾರಿ ಮಾಡಲಾಗಿದೆ. ಈ ಸಭೆಗೆ ಜನರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದರು.

ಆದರೆ ಬೀಟ್‌ಗೆ ನೇಮಕವಾದ ಪೊಲೀಸರ ಬಗ್ಗೆಯೇ ಗ್ರಾಮಸ್ಥರಿಗೆ ಮಾಹಿತಿ ಇಲ್ಲ. ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಸಬೆ ನಡೆಸಬೇಕು ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ಶಿಲ್ಪಾ ಸುವರ್ಣ ಸೂಚಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಎಎಸ್ಸೈ ತಿಳಿಸಿದರು.

ಮುದರಂಗಡಿ-ನಂದಿಕೂರು ರಸ್ತೆಯ ಬೆಳ್ಳಿಬೆಟ್ಟು ಬಳಿ ಬೃಹತ್ ಮರಗಳಿದ್ದು ಇಲ್ಲಿನ ನಿವಾಸಿಗಳಿಗೆ ತೊಂದರೆಯಾಗುತ್ತಿದೆ. ಇದರಡಿಯಲ್ಲೇ ವಿದ್ಯುತ್ ತಂತಿಗಳು ಹಾದು ಹೋಗಿದ್ದು ಅಪಾಯಕ್ಕೆ ಆಹ್ವಾನಿಸುತ್ತಿದೆ. ಮರಗಳ ಕೊಂಬೆಗಳನ್ನು ಶೀಘ್ರ ತೆರವುಗೊಳಿಸಬೇಕು ಗ್ರಾಮಸ್ಥರು ಆಗ್ರಹಿಸಿದರು.

ಇಲಾಖೆ ಅಧಿಕಾರಿಗಳಾದ ಶಕುಂತಳಾ, ವಾದಿರಾಜ್, ಮೀರಾ ಇಂದಿರಾ, ಗಿರೀಶ್, ಅಭಿಲಾಷ್, ಶರಾವತಿ, ಲೀಲಾವತಿ ಮಾಹಿತಿ ನೀಡಿದರು.

ಇದೇ ಸಂದರ್ಭ ಶಾಸಕ ಲಾಲಾಜಿ ಮೆಂಡನ್ ಅವರನ್ನು ಸನ್ಮಾನಿಸಲಾಯಿತು.

ತಾಪಂ ಸದಸ್ಯ ಕೇಶವ ಮೊಯ್ಲಿ, ಗ್ರಾಪಂ ಅಧ್ಯಕ್ಷೆ ವಸಂತಿ ಮಧ್ವರಾಜ್, ಉಪಾಧ್ಯಕ್ಷ ಜಯಂತ್‌ಕುಮಾರ್, ಪಿಡಿಒ ಮಮತಾ ವೈ. ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ ಕೋಟ್ಯಾನ್, ನೋಡೆಲ್ ಅಧಿಕಾರಿ ಗಿರಿಧರ ಗಾಣಿಗ ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News