ಮಂಗಳೂರಿನಿಂದ ಜಿದ್ದಾ, ಮದೀನಾಕ್ಕೆ ನೇರ ವಿಮಾನ ಯಾನ ಕಲ್ಪಿಸಲು ಆಗ್ರಹಿಸಿ ಸಚಿವರಿಗೆ ಮನವಿ

Update: 2018-07-22 09:18 GMT

ಮಂಗಳೂರು, ಜು.22: ಉಮ್ರಾ ಹಾಗೂ ಇತರ ಯಾತ್ರಿಕರ ಅನುಕೂಲಕ್ಕಾಗಿ ಮಂಗಳೂರಿನಿಂದ ಜಿದ್ದಾ ಅಥವಾ ಮದೀನಾಕ್ಕೆ ನೇರ ವಿಮಾನ ಯಾನದ ವ್ಯವಸ್ಥೆ ಕಲ್ಪಿಸುವಂತೆ ದಕ್ಷಿಣ ಕನ್ನಡ ಹಜ್ ಮತ್ತು ಉಮ್ರಾ ಟೂರ್ ಆಪರೇಟರ್ ಸಂಘ ಒತ್ತಾಯಿಸಿದೆ.

ಈ ಬಗ್ಗೆ ಸಂಘವು ರಾಜ್ಯ ಹಜ್ ಮತ್ತು ವಕ್ಫ್ ಸಚಿವ ಝಮೀರ್ ಅಹ್ಮದ್ ಅವರಿಗೆ ಮನವಿ ಸಲ್ಲಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯು ಗಣನೀಯವಾಗಿ ಅಲ್ಪಸಂಖ್ಯಾತ ಮುಸ್ಲಿಮ್ ಸಮುದಾಯವು ಸಾಂಪ್ರದಾಯಿಕವಾಗಿ ವಾಸಿಸುತ್ತಿರುವ ಜಿಲ್ಲೆಯಾಗಿದೆ. ಇಲ್ಲಿಂದ ಉಮ್ರಾ ನಿರ್ವಹಿಸಲು ಬೆಂಗಳೂರು, ಕೋಝಿಕ್ಕೋಡ್ ಅಥವಾ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಅವಲಂಬಿಸಬೇಕಿದೆ. ಈ ಯಾತ್ರಾರ್ಥಿಗಳಲ್ಲಿ ಬಹುತೇಕರು ಹಿರಿಯ ನಾಗರಿಕರಾಗಿರುವುದರಿಂದ ಇಷ್ಟೊಂದು ದೂರ ರಸ್ತೆ ಮೂಲಕ ಸಂಚರಿಸಬೇಕಾದ ಅನಿವಾರ್ಯತೆ ಇದೆ. ಇದು ಯಾತ್ರಾರ್ಥಿಗಳಿಗೆ ತ್ರಾಸದಾಯಕವಾಗುತ್ತದೆ. ಇದಲ್ಲದೆ ಅನಿವಾಸಿ ಭಾರತೀಯ ಉದ್ಯಮಿಗಳು, ಸೌದಿಯಲ್ಲಿರುವ ಉದ್ಯೋಗಸ್ಥರು ಹಾಗೂ ಇತರ ಪ್ರಯಾಣಿಕರು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಜಿದ್ದಾ ಅಥವಾ ಮದೀನಾಕ್ಕೆ ನೇರ ವಿಮಾನ ಯಾನ ಆರಂಭಿಸಲು ಕ್ರಮ ಕೈಗೊಳ್ಳಬೇಕು. ವಾರದಲ್ಲಿ ಕನಿಷ್ಠ ಎರಡು ಯಾನಕ್ಕೆ ಶಿಫಾರಸು ಮಾಡುವಂತೆ ಸಂಘವು ಮನವಿಯಲ್ಲಿ ಒತ್ತಾಯಿಸಿದೆ.

ಮನವಿಗೆ ಸಚಿವ ಝಮೀರ್ ಅಹ್ಮದ್ ಅವರು ಸಕರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಸಂಘದ ಸ್ಥಾಪಕ ಝಾಕೀರ್ ಇಕ್ಲಾಸ್ ತಿಳಿಸಿದ್ದಾರೆ.
 ಸಂಘದ ಅಧ್ಯಕ್ಷ ಅನ್ಸಾರ್ ತಂಙಳ್, ಪ್ರಧಾನ ಕಾರ್ಯದರ್ಶಿ ಝಕೀರ್ ಹುಸೇನ್ ಕೃಷ್ಣಾಪುರ, ಹಸನ್ ಸಾಗ್, ಮೊಯ್ದಿನ್ ಮುಕ್ಕ, ಚೈ ಬಾವು ಕ್ಲಾಸಿಕ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News