ರಾಷ್ಟ್ರೀಯ ಪಿಂಚಣಿ ಯೋಜನೆಯ ಬಗ್ಗೆ ನಿಮಗೆಷ್ಟು ಗೊತ್ತಿದೆ......?

Update: 2018-07-22 11:13 GMT

ಉತ್ತಮ ವೈದ್ಯಕೀಯ ಸೌಲಭ್ಯ ಮತ್ತು ನೈರ್ಮಲ್ಯದಿಂದಾಗಿ ಭಾರತೀಯರ ಸರಾಸರಿ ಆಯುಷ್ಯ ಹೆಚ್ಚುತ್ತಿದೆ. ಆಯುಷ್ಯ ಹೆಚ್ಚುತ್ತಿದೆ ನಿಜ,ಆದರೆ ಅದರೊಂದಿಗೆ ಜೀವನ ವೆಚ್ಚದಲ್ಲಿಯೂ ಏರಿಕೆಯಾಗುತ್ತಿದೆ. ಹೀಗಾಗಿ ವ್ಯಕ್ತಿ ದುಡಿಮೆಯಿಂದ ನಿವೃತ್ತಿಯ ಬಳಿಕ ತನ್ನ ಜೀವನಕ್ಕಾಗಿ ಸಾಕಷ್ಟು ಉಳಿತಾಯವನ್ನು ಮಾಡುವುದು ಅಗತ್ಯವಾಗಿದೆ. ಸರಕಾರಿ ನೌಕರರಿಗೇನೋ ಜೀವಮಾನ ಪರ್ಯಂತ ಪಿಂಚಣಿ ದೊರೆಯುತ್ತದೆ. ಆದರೆ ಖಾಸಗಿ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರಿಗೆ ಈ ಭಾಗ್ಯವಿಲ್ಲ. ಇಂತಹವರನ್ನು ಕೈಗೆಟಕುವ ಸಾಮಾಜಿಕ ಭದ್ರತಾ ಯೋಜನೆಗಳ ವ್ಯಾಪ್ತಿಗೆ ತರಲು ಸರಕಾರವು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(ಪಿಎಫ್‌ಆರ್‌ಡಿಎ)ದ ಅಧೀನದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್‌ಪಿಎಸ್)ಯನ್ನು ಆರಂಭಿಸಿದೆ. ಎನ್‌ಪಿಎಸ್ ಕಡಿಮೆ ವೆಚ್ಚದ,ತೆರಿಗೆ ವಿನಾಯಿತಿಯ ಸುಲಭ ಯೋಜನೆಯಾಗಿದೆ. ಈ ಯೋಜನೆಯಡಿ ಮೂರು ವಿಧಗಳ ಖಾತೆಗಳಿವೆ.

ಟೈರ್ 1: ಯೋಜನೆಯ ಅವಧಿಯು ಪೂರ್ಣಗೊಳ್ಳುವವರೆಗೆ ಈ ಖಾತೆಯಿಂದ ಹಣವನ್ನು ಹಿಂಪಡೆಯುವಂತಿಲ್ಲ. ಖಾತೆದಾರನು ಖಾತೆಯು ಸ್ತಂಭನಗೊಳ್ಳದಿರಲು ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 6,000 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ.

 ಟೈರ್ 2: ಖಾತೆದಾರನು ತನ್ನ ಅನುಕೂಲಕ್ಕೆ ತಕ್ಕಂತೆ ಈ ಖಾತೆಗೆ ಹಣವನ್ನು ಜಮಾ ಮಾಡಬಹುದು ಅಥವಾ ಹಿಂಪಡೆಯಬಹುದು. ಆದರೆ ಇದು ಟೈರ್ 1 ಖಾತೆಗೆ ಹೆಚ್ಚುವರಿಯಾಗಿರುತ್ತದೆ. ಅಂದರೆ ಟೈರ್ 2 ಖಾತೆಯನ್ನು ತೆರೆಯಲು ಟೈರ್ 1 ಖಾತೆಯನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ. ಹಣಕಾಸು ವರ್ಷವೊಂದರಲ್ಲಿ ಈ ಖಾತೆಗೆ ಕನಿಷ್ಠ 2,000 ರೂ.ಗಳನ್ನು ಜಮಾ ಮಾಡಬೇಕಾಗುತ್ತದೆ.

ಸ್ವಾಭಿಮಾನಿ ಖಾತೆ: ಈ ಖಾತೆಗೆ ಆರಂಭದ ನಾಲ್ಕು ವರ್ಷಗಳ ಕಾಲ ಪ್ರತಿವರ್ಷ 1,000 ರೂ.ಗಳನ್ನು ಭಾರತ ಸರಕಾರವು ಜಮಾ ಮಾಡುತ್ತದೆ.

ಎನ್‌ಪಿಎಸ್ ಖಾತೆಯನ್ನು ಆರಂಭಿಸುವಾಗ ವ್ಯಕ್ತಿಯು ತನ್ನ ನಾಮಿನಿಯನ್ನು ನೇಮಿಸಬೇಕಾಗುತ್ತದೆ. ಟೈರ್1 ಮತ್ತು 2 ಖಾತೆಗಳಿಗಾಗಿ ಮೂರರವರೆಗೆ ನಾಮಿನಿಗಳನ್ನು ನೇಮಿಸಬಹುದಾಗಿದೆ. ಕಾಯಂ ಪಿಂಚಣಿ ಖಾತೆ ಸಂಖ್ಯೆ(ಪಿಆರ್‌ಎಎನ್) ದೊರೆತ ಬಳಿಕ ಖಾತೆದಾರನು ನಾಮಿನಿಗಳನ್ನು ಬದಲಿಸಲು ಅವಕಾಶವಿದೆ.

ನಿವಾಸಿ ಅಥವಾ ಅನಿವಾಸಿಯಾಗಿರುವ 18ರಿಂದ 60ವರ್ಷದೊಳಗಿನ ಭಾರತೀಯ ಪ್ರಜೆ ಈ ಯೋಜನೆಯನ್ನು ಸೇರಬಹುದು. ವ್ಯಕ್ತಿಗತವಾಗಿ ಅಥವಾ ಉದ್ಯೋಗದಾತ-ಉದ್ಯೋಗಿ ಗುಂಪುಗಳಾಗಿ ಯೋಜನೆಗೆ ಸೇರ್ಪಡೆಯಾಗಬಹುದು. ಅನಿವಾಸಿ ಭಾರತೀಯರು ಈ ಯೋಜನೆಯಲ್ಲಿ ತೊಡಗಿಸುವ ಹಣ ಆರ್‌ಬಿಐ ಮತ್ತು ಫೆಮಾ ನಿಯಂಂತ್ರಣಕ್ಕೊಳಪಟ್ಟಿರುತ್ತದೆ. ಅಲ್ಲದೆ ಉದ್ಯೋಗಿಗಳು ಭವಿಷ್ಯನಿಧಿ ಸಂಸ್ಥೆಗೆ ವಂತಿಗೆಗಳನ್ನು ಸಲ್ಲಿಸುತ್ತಿದ್ದರೂ ಈ ಯೋಜನೆಗೆ ಸೇರಬಹುದಾಗಿದೆ.

ಹೆಚ್ಚಿನ ಎಲ್ಲ ಬ್ಯಾಂಕುಗಳು ಮತ್ತು ಆಯ್ದ ಹಣಕಾಸು ಸಂಸ್ಥೆಗಳಲ್ಲಿ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಎನ್‌ಪಿಎಸ್ ಖಾತೆಯನ್ನು ತೆರೆಯಬಹುದಾಗಿದ.

 ಎನ್‌ಪಿಎಸ್‌ನಲ್ಲಿ ಖಾತೆದಾರರು ಜಮಾ ಮಾಡುವ ಹಣವನ್ನು ಐಸಿಐಸಿಐ ಪ್ರುಡೆನ್ಶಿಯಲ್ ಪೆನ್ಶನ್ ಫಂಡ್,ಎಲ್ಲೈಸಿ ಪೆನ್ಶನ್ ಫಂಡ್,ಕೋಟಕ್ ಮಹೀಂದ್ರ ಪೆನ್ಶನ್ ಫಂಡ್ ಇತ್ಯಾದಿ ಎಂಟು ಫಂಡ್ ಮ್ಯಾನೇಜರ್ ಸಂಸ್ಥೆಗಳು ನಿರ್ವಹಿಸುತ್ತವೆ. ಫಂಡ್‌ಗಳನ್ನು ನಿರ್ವಹಿಸುವ ಸಂಸ್ಥೆಯನ್ನು ಖಾತೆದಾರ ಆಯ್ಕೆ ಮಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News