ಆರ್ ಸಿ ಮೂಲ ಪ್ರತಿ ಒಯ್ಯದ್ದಕ್ಕೆ ಪೊಲೀಸ್ ಅಧಿಕಾರಿಯಿಂದ ಹಿಗ್ಗಾಮುಗ್ಗಾ ಥಳಿತ: ಆರೋಪ

Update: 2018-07-22 11:21 GMT

ಚೆನ್ನೈ, ಜು.22: ರಿಜಿಸ್ಟ್ರೇಷನ್ ಸರ್ಟಿಫಿಕೇಟ್ (ಆರ್ ಸಿ) ಮೂಲಪ್ರತಿ ವಾಹನದಲ್ಲಿ ಒಯ್ಯದ್ದನ್ನೇ ನೆಪ ಮಾಡಿಕೊಂಡು ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು 22ರ ಯುವಕನೊಬ್ಬ ಆರೋಪಿಸಿದ್ದಾನೆ. ತಮಿಳುನಾಡಿನಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ಯುವಕ ಹಾಕಿರುವ ಫೇಸ್ಬುಕ್ ಪೋಸ್ಟ್ ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹಾರೂನ್ ಸೇಟ್ ಎಂಬ ಯುವಕ ತನ್ನ ಇಬ್ಬರು ಸ್ನೇಹಿತರ ಜತೆಗೆ ಬೈಕ್‍ನಲ್ಲಿ ಮದುವೆ ಸಮಾರಂಭವೊಂದರಿಂದ ವಾಪಸ್ಸಾಗುತ್ತಿದ್ದಾಗ, ಸ್ಪರ್ ಟ್ಯಾಂಕ್ ರಸ್ತೆ ಬಳಿ ಪೊಲೀಸರು ತಡೆದಿದ್ದರು. ಸ್ನೇಹಿತರ ಲೈಸನ್ಸ್ ತೋರಿಸುವಂತೆ ಪೊಲೀಸರು ಕೇಳಿದ್ದು, ಲೈಸನ್ಸ್ ತರಲಿಲ್ಲ ಎಂದು ಹೇಳಿದಾಗ 300 ರೂಪಾಯಿ ದಂಡ ಪಾವತಿಸುವಂತೆ ಸೂಚಿಸಿದರು. ಆದರೆ ಇದಕ್ಕೆ ರಸೀತಿ ನೀಡಿಲ್ಲ ಎಂದು ಹಾರೂನ್ ಫೇಸ್ಬುಕ್ ಪೋಸ್ಟ್ ನಲ್ಲಿ ಆಪಾದಿಸಿದ್ದಾರೆ.

ಬಳಿಕ ಸಬ್ ಇನ್ ಸ್ಪೆಕ್ಟರ್ ಇಳಯರಾಜ ಅವರು ಹಾರೂನ್ ಬಳಿ ಲೈಸನ್ಸ್ ಮತ್ತು ಆರ್ ಸಿ ಪುಸ್ತಕ ಕೇಳಿದ್ದು, ಹಾರೂನ್ ಜೆರಾಕ್ಸ್ ಪ್ರತಿಯನ್ನು ನೀಡಿ, ಬೈಕನ್ನು ಠಾಣೆಯಲ್ಲೇ ಬಿಟ್ಟು, ಮರುದಿನ ಮುಂಜಾನೆ ಮೂಲ ಪ್ರತಿ ತರುವುದಾಗಿ ಹೇಳಿದ್ದ. ಆಗ ಎಸ್‍ಐ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ತಮಿಳುನಾಡು ಸರ್ಕಾರ 2017ರ ಸೆಪ್ಟೆಂಬರ್ 1ರಂದು ಹೊರಡಿಸಿದ ಆದೇಶದ ಪ್ರಕಾರ, ಚಾಲಕರು ತಮ್ಮ ಮೂಲ ಲೈಸನ್ಸ್ ಒಯ್ಯುವುದು ಕಡ್ಡಾಯ. ಆದರೆ ಆರ್‍ ಸಿ ಪುಸ್ತಕಕ್ಕೆ ಇದು ಅನ್ವಯಿಸುವುದಿಲ್ಲ.

"ನಾನು ನನ್ನ ಸ್ಕೂಟರ್ ಕೀಯನ್ನು ಅವರಿಗೆ ನೀಡಿ, ಸ್ಕೂಟರನ್ನು ಪೊಲೀಸ್ ಠಾಣೆಗೆ ಒಯ್ಯುವಂತೆ ವಿನಂತಿ ಮಾಡಿದೆ. ಆದರೆ ಸ್ಕೂಟರ್ ಒಯ್ಯುವುದಕ್ಕೆ ರಸೀದಿ ನೀಡಬೇಕು ಎಂದು ಆಗ್ರಹಿಸಿದೆ. ಆರ್ ಸಿ ಮೂಲಪ್ರತಿಯನ್ನು ಮರುದಿನ ಮುಂಜಾನೆ ತೋರಿಸಿದ ಬಳಿಕ ಸ್ಕೂಟರ್ ಮರಳಿಸುವಂತೆ ಕೇಳಿದೆ. ಕೋಪಗೊಂಡ ಇನ್‍ಸ್ಪೆಕ್ಟರ್ ಕೆನ್ನೆಗೆ ಹೊಡೆದರು. ನನ್ನ ಕನ್ನಡಕ ನೆಲಕ್ಕೆ ಬಿತ್ತು. ಬಳಿಕ ಲಾಠಿಯಿಂದ ನಿರಂತರವಾಗಿ ಹೊಡೆದರು. ನಾನು ನೋವಿನಿಂದ ಚೀರಿಕೊಳ್ಳುತ್ತಿದ್ದರೂ ಜತೆಯಲ್ಲಿದ್ದ ಐವರು ಪೊಲೀಸರು ಮೂಕಪ್ರೇಕ್ಷಕರಾಗಿ ಇದನ್ನು ನೋಡುತ್ತಾ ನಿಂತಿದ್ದರು. ನಾನು ಹತ್ತು ಬಾರಿ ಕ್ಷಮೆ ಯಾಚಿಸುವವರೆಗೂ ಹೊಡೆಯುತ್ತಲೇ ಇದ್ದರು. ಆಗ ನನ್ನ ಎಡಗೈ ಊದಿತ್ತು. ತಂದೆತಾಯಿಗೆ ವಿಷಯ ತಿಳಿಸಲು ಫೋನ್ ಹೊರತೆಗೆದೆ. ತಕ್ಷಣ ಮೊಬೈಲ್ ಕಸಿದುಕೊಂಡು ಸ್ಟೇಷನ್‍ಗೆ ಕರೆದೊಯ್ದು ವೈದ್ಯಕೀಯ ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಕರೆಮಾಡಲು ಅವಕಾಶ ನೀಡಲಿಲ್ಲ. ಇಬ್ಬರು ಸ್ನೇಹಿತರ ಮೊಬೈಲ್ ಕೂಡಾ ಕಸಿದುಕೊಂಡರು" ಎಂದು ಹಾರೂನ್ ಆರೋಪಿಸಿದ್ದಾರೆ.

ಈ ಬಗ್ಗೆ ಚೆಟ್ ಪೇಟೆ ಪೊಲೀಸರಿಂದ ಸ್ಪಷ್ಟನೆ ಕೋರಿದಾಗ, "ಅವರು ಪ್ರಸ್ತುತಪಡಿಸಿದ ಜೆರಾಕ್ಸ್ ಪ್ರತಿಯಲ್ಲಿ ಅವರು ಹೇಳಿದ ಹೆಸರಿನ ಬದಲಾಗಿ ಬೇರೆ ಹೆಸರಿತ್ತು. ಉದ್ಧಟತನದಿಂದ ಮಾತನಾಡಿದ್ದಲ್ಲದೇ ವಾಗ್ವಾದಕ್ಕೆ ಇಳಿದರು. ಆಗ ಪೊಲೀಸ್ ಅಧಿಕಾರಿ ಒಂದು ಬಾರಿ ಹೊಡೆದದ್ದು ನಿಜ" ಎಂದು ಹೇಳಿದ್ದಾರೆಂದು ವರದಿಯಾಗಿದೆ.

ಆದರೆ ಆಸ್ಪತ್ರೆಯಲ್ಲಿರುವ ಹಾರೂನ್ ಪೋಸ್ಟ್ ಮಾಡಿದ ಫೋಟೊದಲ್ಲಿ ಮೊಣಕಾಲು, ಕೈ ಹಾಗೂ ತೋಳಿನಲ್ಲಿ ಆಳದ ಗಾಯಗಳಿವೆ. ಸಂಬಂಧಪಟ್ಟ ಪೊಲೀಸ್ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಲು ಹಾರೂನ್ ಮುಂದಾಗಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News