ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾರಿಂದ ರಾಹುಲ್ ಗುಣಗಾನ

Update: 2018-07-22 11:41 GMT

ಹೊಸದಿಲ್ಲಿ, ಜು.22: ಮೋದಿ ಸರ್ಕಾರದ ವಿರುದ್ಧ ಲೋಕಸಭೆಯಲ್ಲಿ ಮಂಡಿಸಿದ್ದ ಅವಿಶ್ವಾಸ ನಿರ್ಣಯದ ಬಗೆಗಿನ ಚರ್ಚೆ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ಮಾಡಿದ ಭಾಷಣವನ್ನು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ ಹಾಗೂ ಸಂಸತ್ತಿನ ಇಡೀ ನಡಾವಳಿಯಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು ಎಂದು ಅವರನ್ನು ಗುಣಗಾನ ಮಾಡಿದ್ದಾರೆ.

"ಕೆಲವೇ ಶಬ್ದಗಳಲ್ಲಿ ಬಹಳಷ್ಟು ವಿಷಯಗಳನ್ನು ಪ್ರಸ್ತುತಪಡಿಸಿದ ಅಸಾದುದ್ದೀನ್ ಒವೈಸಿ ಅವರು ಪರಿಣಾಮಕಾರಿ ಹಾಗೂ ತೀಕ್ಷ್ಣವಾಗಿದ್ದರು. ತಾರಿಕ್ ಅನ್ವರ್ ಕೂಡಾ ಫಾರೂಕ್ ಅಬ್ದುಲ್ಲಾ ಅವರಂತೆ ಚಿಕ್ಕ- ಚೊಕ್ಕ ಪರಿಣಾಮಕಾರಿ ಭಾಷಣ ಮಾಡಿದರು. ಎಲ್ಲವೂ ಶ್ಲಾಘನೀಯವಾಗಿತ್ತು. ಆದರೆ ನನ್ನ ಮಟ್ಟಿಗೆ ಇಡೀ ಗಮನ ಸೆಳೆದದ್ದು ರಾಹುಲ್‍ಗಾಂಧಿ" ಎಂದು ಸಿನ್ಹಾ ಹೇಳಿದ್ದಾರೆ.

ಸಿನ್ಹಾ ತಮ್ಮ ಸರಣಿ ಟ್ವೀಟ್‍ಗಳಲ್ಲಿ, ಪರಿಣಾಮಕಾರಿಯಾಗಿ ಭಾಷಣ ಮಾಡಿದ ಇತರರ ಹೆಸರನ್ನೂ ಉಲ್ಲೇಖಿಸಿದ್ದಾರೆ. ಸುಗತಾ ರಾಯ್, ದಿನೇಶ್ ತ್ರಿವೇದಿ, ಜಯದೇವ್ ಗಲ್ಲಾ, ಪರಿಣಾಮಕಾರಿ ಚರ್ಚೆ ಮೂಲಕ ಸಂಚಲನ ಮೂಡಿಸಿದರು ಎಂದು ಸಿನ್ಹಾ ಟ್ವೀಟಿಸಿದ್ದಾರೆ. ಆದಾಗ್ಯೂ ಮೋದಿಯವರ ವಾಕ್ ಚಾತುರ್ಯವನ್ನು ಕೂಡಾ ಸಿನ್ಹಾ ಹೊಗಳಿದ್ದಾರೆ. "ಅವರ ವಾಕ್ ಪಟುತ್ವವನ್ನು ಜನ ಆಸ್ವಾದಿಸಿದರು. ಆದರೆ ಭಾಷಣ ಚಿಕ್ಕ ಹಾಗೂ ಪರಿಣಾಮಕಾರಿಯಾಗಿರಬೇಕಿತ್ತು ಎಂದು ಅಪೇಕ್ಷಿಸಿದರು. ಅವರ ಸ್ನೇಹಿತ ಹಾಗೂ ಸಹೋದ್ಯೋಗಿಯಾಗಿ ಇದನ್ನು ಹೇಳುತ್ತಿದ್ದೇನೆ. ನಮ್ಮ ನಿರೀಕ್ಷೆಯಂತೆ ನಿಲುವಳಿಗೆ ಸೋಲು ಉಂಟಾಯಿತು. ಏಕೆಂದರೆ ಸಂಖ್ಯಾಬಲ ನಮಗಿತ್ತು!" ಎಂದು ಸಿನ್ಹಾ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News