ಸುಳ್ಳುಸುದ್ದಿ ವಿರುದ್ಧ ಸಮರಕ್ಕೆ ಮುಂದಾದ ಮೈಸೂರು ಮೂಲದ ಉದ್ಯಮಿಯ ಕಂಪೆನಿ

Update: 2018-07-22 11:47 GMT
ಲಿರಿಕ್ ಜೈನ್ 

ಲಂಡನ್, ಜು.22: ಕಾಲ್ಪನಿಕ ಅಂಶಗಳಿಂದ ಸತ್ಯಾಂಶವನ್ನು ಬೇರ್ಪಡಿಸಲು ಮೆಷಿನ್ ಲರ್ನಿಂಗ್ ಅಲ್ಗೊರಿಥಮ್ ಬಳಸುವ ಸ್ಟಾರ್ಟ್‍ಅಪ್ ಕಂಪನಿಯೊಂದು ವಿಶ್ವಾದ್ಯಂತ ಸುಳ್ಳುಸುದ್ದಿಗಳ ವಿರುದ್ಧದ ಸಮರಕ್ಕೆ ಸಜ್ಜಾಗಿದೆ. ಅದರಲ್ಲೂ ಮುಖ್ಯವಾಗಿ ಭಾರತವನ್ನು ಗುರಿ ಮಾಡಿ ತನ್ನ ಕಾರ್ಯಯೋಜನೆಯನ್ನು ಅನುಷ್ಠಾನಕ್ಕೆ ತರಲು ಮುಂದಾಗಿದೆ. ಭಾರತೀಯ ಮೂಲದ ಉದ್ಯಮಿಯ ಕಂಪೆನಿ ಇದಾಗಿದೆ.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಎಂಜಿನಿಯರಿಂಗ್ ಪದವೀಧರ ಲಿರಿಕ್ ಜೈನ್ ಮೂಲತಃ ಮೈಸೂರಿನವರು. ಕಳೆದ ವರ್ಷ ಇವರು ಪಶ್ಚಿಮ ಯಾರ್ಕ್‍ಶೈರ್ ನಲ್ಲಿ ಕಾಲ್ಪನಿಕ ಅಂಶಗಳಿಂದ ನೈಜ ಸುದ್ದಿಯನ್ನು ಶೋಧಿಸಲು ಮೆಷಿನ್ ಲರ್ನಿಂಗ್ ಪ್ಲಾಟ್‍ಫಾರಂ ಬಳಸುವ ಸ್ಟಾರ್ಟ್‍ಅಪ್ ಆರಂಭಿಸಿದ್ದಾರೆ.

ಪಾಲುದಾರರು ಹಾಗೂ ಸಲಹೆಗಾರರ ಜತೆಗೆ ಈ ಪ್ಲಾಟ್‍ಫಾರಂನ ತಂತ್ರಜ್ಞಾನ ಪ್ರಯೋಗ ನಡೆಯುತ್ತಿದ್ದು, ಮುಂದಿನ ಸೆಪ್ಟೆಂಬರ್‍ ನಲ್ಲಿ ಅಮೆರಿಕ ಹಾಗೂ ಇಂಗ್ಲೆಂಡ್‍ನಲ್ಲಿ ಇದು ಚಾಲನೆಗೊಳ್ಳಲಿದೆ. ಅಕ್ಟೋಬರ್‍ ನಲ್ಲಿ ಭಾರತಕ್ಕೆ ಲಗ್ಗೆ ಇಡಲಿದೆ. ಇದು ಸುದ್ದಿಯನ್ನು ಸಮರ್ಪಕಗೊಳಿಸುವ ಗುರಿಯನ್ನು ಹೊಂದಿದ್ದು, ಅಂಕಿ ಅಂಶಗಳ ನಿಖರತೆಯ ಸೂಚಕವಾಗಲಿದೆ ಎಂದು ಹೇಳಲಾಗಿದೆ.

"ತಾತ್ವಿಕವಾಗಿ ಈ ಪ್ಲಾಟ್‍ ಫಾರಂ 70 ಸಾವಿರಕ್ಕೂ ಅಧಿಕ ಡೊಮೈನ್‍ಗಳಿಂದ ಸುದ್ದಿಗಳನ್ನು ಕ್ರೋಢೀಕರಿಸಿ, ಪ್ರತಿ ಲೇಖನದ ವಿಶ್ವಾಸಾರ್ಹತೆಯನ್ನು ನಿರ್ಧರಿಸಲಿದೆ. ಮೆಷಿನ್ ಲರ್ನಿಂಗ್ ಅಲ್ಗೊರಿಥಮ್ ಬಳಸುವ ಮೂಲಕ ಈ ಕಾರ್ಯವನ್ನು ಮಾಡಲಾಗುವುದು. ಸುದ್ದಿಯಲ್ಲಿನ ಸೈದ್ಧಾಂತಿಕ ಪಕ್ಷಪಾತ, ರಾಜಕೀಯ ಪಕ್ಷಪಾತ ನೀತಿ ಮತ್ತು ತಪ್ಪು ಅಂಕಿ ಅಂಶಗಳನ್ನು ಇದು ಪತ್ತೆ ಮಾಡಲಿದೆ" ಎಂದು 21 ವರ್ಷದ ತಂತ್ರಜ್ಞ ವಿವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News