ಗುಂಪು ಹತ್ಯೆಗಳ ವಿರುದ್ಧ ಸೂಕ್ತ ಕ್ರಮಕ್ಕೆ ಉನ್ನತಮಟ್ಟದ ಸಮಿತಿ ರಚಿಸಿದ ಕೇಂದ್ರ ಸರಕಾರ

Update: 2018-07-23 16:28 GMT

ಹೊಸದಿಲ್ಲಿ, ಜು. 23: ದೇಶದಲ್ಲಿ ‘ಗುಂಪು ಹಿಂಸಾಚಾರ’ ಘಟನೆಗಳ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಆಂತರಿಕ ವ್ಯವಹಾರಗಳ ಸಚಿವಾಲಯ ಸೋಮವಾರ, ‘ಗುಂಪು ಹತ್ಯೆ’ ಹಾಗೂ ‘ಗುಂಪು ಹಿಂಸಾಚಾರ’ದ ವಿರುದ್ಧ ಕಾನೂನು ಸಲಹೆ ನೀಡಲು ಕೇಂದ್ರ ಗೃಹ ಕಾರ್ಯದರ್ಶಿ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ರೂಪಿಸಲಾಗಿದೆ ಎಂದು ಹೇಳಿದೆ. ಗೃಹ ಕಾರ್ಯದರ್ಶಿ ರಾಜೀವ್ ಗೌಬಾ ಅಧ್ಯಕ್ಷತೆಯ ಸಮಿತಿ ನಾಲ್ಕು ವಾರಗಳಲ್ಲಿ ಶಿಫಾರಸುಗಳನ್ನು ಸಲ್ಲಿಸಲಿದೆ ಎಂದು ಅದು ಹೇಳಿದೆ. ‘‘ದೇಶದ ಕಾನೂನು ಈ ಭಯಾನಕ ಗುಂಪು ಹಿಂಸಾಚಾರಕ್ಕೆ ಅವಕಾಶ ನೀಡದು’’ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಇಂತಹ ಅಪರಾಧಗಳನ್ನು ತಡೆಯಲು ವಿಶೇಷ ಕಾಯ್ದೆ ರೂಪಿಸುವಂತೆ ಸಂಸತ್ತಿಗೆ ನಿರ್ದೇಶಿಸಿದ ಕೆಲವು ದಿನಗಳ ಬಳಿಕ ಕೇಂದ್ರ ಸರಕಾರ ಈ ಕ್ರಮ ಕೈಗೊಂಡಿದೆ. ‘ಗುಂಪು ಹತ್ಯೆ’ ಕುರಿತು ಕಾಯ್ದೆ ರೂಪಿಸಲು ಶಿಫಾರಸಿಗೆ ಕೇಂದ್ರ ಸಚಿವ ರಾಜನಾಥ್ ಸಿಂಗ್ ನೇತೃತ್ವದಲ್ಲಿ ಸಚಿವರ ಗುಂಪೊಂದನ್ನು ಕೂಡ ರೂಪಿಸಲಾಗಿದೆ.

 ಸಚಿವರ ಗುಂಪು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಿಫಾರಸುಗಳನ್ನು ಸಲ್ಲಿಸಲಿದೆ. ದೇಶದ ವಿವಿಧ ಭಾಗಗಳಲ್ಲಿ ನಡೆದ ‘ಗುಂಪು ಹಿಂಸಾಚಾರ’ ಘಟನೆಗಳ ಬಗ್ಗೆ ಸರಕಾರಕ್ಕೆ ಕಳವಳ ಇದೆ. ಇಂತಹ ಘಟನೆಗಳನ್ನು ಸರಕಾರ ಈಗಾಗಲೇ ಖಂಡಿಸಿದೆ. ಕಾನೂನಿನ ನಿಯಮಗಳನ್ನು ಎತ್ತಿ ಹಿಡಿಯಲು ಸರಕಾರ ಬದ್ಧವಾಗಿದೆ ಹಾಗೂ ಇಂತಹ ಘಟನೆಗಳನ್ನು ನಿಗ್ರಹಿಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ ಎಂದು ಸರಕಾರ ಸಂಸತ್ತಿನಲ್ಲಿ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯದ ಪತ್ರಿಕಾ ಹೇಳಿಕೆ ತಿಳಿಸಿದೆ. ‘ಗುಂಪು ಹಿಂಸಾಚಾರ’ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ ಆದೇಶಕ್ಕೆ ಸರಕಾರ ಗೌರವ ನೀಡುತ್ತದೆ ಹಾಗೂ ‘ಗುಂಪು ಹಿಂಸಾಚಾರ’ ಹಾಗೂ ‘ಗುಂಪು ಹತ್ಯೆ’ ಘಟನೆಗಳನ್ನು ನಿಗ್ರಹಿಸಲು ಕಾನೂನಿನ ಪ್ರಕಾರ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಸರಕಾರಗಳಿಗೆ ಸಲಹೆಗಳನ್ನು ನೀಡಲಾಗಿದೆ ಎಂದು ಹೇಳಿಕೆ ತಿಳಿಸಿದೆ. ಈ ವಿಷಯದ ಕುರಿತು ಸುಪ್ರೀಂ ಕೋರ್ಟ್ ಜುಲೈ 17ರಂದು ನೀಡಿದ ನಿರ್ದೇಶನಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರಗಳಿಗೆ ಸಲಹೆ ನೀಡಲಾಗಿದೆ ಎಂದು ಆಂತರಿಕ ವ್ಯವಹಾರಗಳ ಸಚಿವಾಲಯ ಹೇಳಿಕೆ ತಿಳಿಸಿದೆ. ಕೇಂದ್ರ ಗೃಹ ಗಕಾರ್ಯದರ್ಶಿ ಅಧ್ಯಕ್ಷತೆಯ ಉನ್ನತ ಮಟ್ಟದ ಸಮಿತಿಯಲ್ಲಿ ಕಾನೂನು ಇಲಾಖೆಯ ಕಾರ್ಯದರ್ಶಿ, ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ, ಶಾಸಕೀಯ ಇಲಾಖೆಯ ಕಾರ್ಯದರ್ಶಿ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಿದ್ದಾರೆ. ಗೃಹ ಸಚಿವರ ನೇತೃತ್ವದ ಸಚಿವರ ಗುಂಪಿನಲ್ಲಿ ಸುಷ್ಮಾ ಸ್ವರಾಜ್, ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್ ಹಾಗೂ ಥಾವರ್‌ಚಂದ್ ಗೆಹ್ಲೋಟ್ ಇದ್ದಾರೆ. ಈ ಸಮಿತಿ ಪ್ರಧಾನಿ ಅವರಿಗೆ ಶಿಫಾರಸು ಸಲ್ಲಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News