×
Ad

ಅನಾಥಾಶ್ರಮದಲ್ಲಿ 40 ಬಾಲಕಿಯರ ಅತ್ಯಾಚಾರ : ಆರೋಪ

Update: 2018-07-23 19:28 IST

ಪಾಟ್ನ, ಜು.23: ಬಿಹಾರದ ಮುಝಫರ್‌ಪುರದಲ್ಲಿ ಸರಕಾರಿ ಅನುದಾನಿತ ಅನಾಥಾಶ್ರಮದಲ್ಲಿ ನೆಲೆಸಿರುವ 40ಕ್ಕೂ ಹೆಚ್ಚು ಅಪ್ರಾಪ್ತ ವಯಸ್ಸಿನ ಬಾಲಕಿಯರ ಮೇಲೆ ಹಲವು ದಿನಗಳಿಂದ ಅತ್ಯಾಚಾರ ನಡೆಸಿರುವುದಾಗಿ ದೂರು ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಅನಾಥಾಶ್ರಮಕ್ಕೆ ಭೇಟಿ ನೀಡಿದಾಗ ಅಲ್ಲಿ ಸಂತ್ರಸ್ತ ಬಾಲಕಿಯರ ಪೈಕಿ ಓರ್ವ ಬಾಲಕಿ ತನ್ನ ಸಂಕಷ್ಟವನ್ನು ತನಿಖಾಧಿಕಾರಿಗಳಲ್ಲಿ ವಿವರಿಸಿದ್ದಾಳೆ. ಅಲ್ಲದೆ ಆಶ್ರಮದ ಓರ್ವ ಬಾಲಕಿ ಮೃತಪಟ್ಟಿದ್ದು ಆಕೆಯ ಶವವನ್ನು ಅನಾಥಾಶ್ರಮದ ಆವರಣದಲ್ಲೇ ಹೂಳಲಾಗಿದೆ ಎಂದು ಆಕೆ ತಿಳಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಇದೀಗ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಪ್ರಿಯಾರಾಣಿ ಗುಪ್ತ ಹಾಗೂ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನೆಲವನ್ನು ಅಗೆಯಲು ಪೊಲೀಸರು ನಿರ್ಧರಿಸಿದ್ದಾರೆ.

 ಈ ಮಧ್ಯೆ ಘಟನೆಯ ಕುರಿತು ಆಘಾತ ವ್ಯಕ್ತಪಡಿಸಿರುವ ಆರ್‌ಜೆಡಿ ಮುಖಂಡ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ನಿತೀಶ್ ಕುಮಾರ್ ನೇತೃತ್ವದ ರಾಜ್ಯ ಸರಕಾರ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ. ಅನಾಥಾಶ್ರಮ ನಡೆಸುತ್ತಿರುವ ಎನ್‌ಜಿಒ ಸಂಘಟನೆಯ ಮಾಲಕ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಅತ್ಯಂತ ನಿಕಟವಾಗಿದ್ದು ಚುನಾವಣೆಯಲ್ಲಿ ಕುಮಾರ್ ಪರ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ. ಘಟನೆಯನ್ನು ಖಂಡಿಸಿ ಸೋಮವಾರ ಟ್ವೀಟ್ ಮಾಡಿರುವ ತೇಜಸ್ವಿ ಯಾದವ್, ಬಿಹಾರದಲ್ಲಿ ಅತ್ಯಾಚಾರ ಘಟನೆಗಳ ಸರಮಾಲೆಯೇ ಸಂಭವಿಸುತ್ತಿದ್ದರೂ ಸರಕಾರ ಮೌನವಾಗಿದೆ. ಅವರು ತಮ್ಮ ಅಧಿಕಾರ ಉಳಿಸಿಕೊಳ್ಳುದಕ್ಕೆ ಮಾತ್ರ ಗಮನ ನೀಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. “ನಿಮ್ಮ ಕುಟುಂಬದ ಅಥವಾ ಗ್ರಾಮದ 7ರಿಂದ 17ರ ವಯೋಮಾನದ ಸಹೋದರಿಯರನ್ನು ತಿಂಗಳುಗಟ್ಟಲೆ ಅತ್ಯಾಚಾರ ಮಾಡಿದರೆ ನಿಮಗೆ ನೋವಾಗುವುದಿಲ್ಲವೇ” ಎಂದವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News