ಅಗತ್ಯವಿದ್ದರೆ ಗುಂಪು ಹತ್ಯೆಯ ವಿರುದ್ಧ ಕಾನೂನು: ರಾಜ್ ನಾಥ್ ಸಿಂಗ್

Update: 2018-07-24 17:30 GMT

ಹೊಸದಿಲ್ಲಿ, ಜು.24: ದೇಶದಾದ್ಯಂತ ಹೆಚ್ಚುತ್ತಿರುವ ಗುಂಪು ಹಲ್ಲೆ ಪ್ರಕರಣಗಳ ಬಗ್ಗೆ ಸಂಸತ್ತಿನಲ್ಲಿಂದು ವಿರೋಧ ಪಕ್ಷಗಳು ಸರಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದವು. ಈ ಮಧ್ಯೆ ಲೋಕಸಭೆಯಲ್ಲಿ ಹೇಳಿಕೆ ನೀಡಿರುವ ಗೃಹ ಸಚಿವ ರಾಜನಾಥ್ ಸಿಂಗ್, ಅಗತ್ಯವಿದ್ದರೆ ಗುಂಪು ಹತ್ಯೆಯ ವಿರುದ್ಧ ಕಾನೂನು ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

 ಸರಕಾರ ಗುಂಪು ಹಲ್ಲೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಗಮನ ನೀಡಲಾಗುವುದು ಎಂದು ಗೃಹ ಸಚಿವರು ತಿಳಿಸಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾವಿಸಿದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು, ಇಂತಹ ಹಿಂಸಾತ್ಮಕ ಘಟನೆಗಳ ವಿರುದ್ಧ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದವು. ಇದಕ್ಕೆ ಧ್ವನಿಗೂಡಿಸಿದ ಬಹುಜನ ಸಮಾಜ ಪಕ್ಷ(ಬಿಎಸ್ಪಿ) ಅಧ್ಯಕ್ಷೆ ಮಾಯಾವತಿ, ಬಿಜೆಪಿಯು ಗುಂಪು ಹಲ್ಲೆ ಪ್ರಕರಣವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು. ಗುಂಪು ಹಲ್ಲೆ ಸಂಕುಚಿತ ಮನೋಭಾವದ ಬಿಜೆಪಿ ಕಾರ್ಯಕರ್ತರ ಹಾಗೂ ಬೆಂಬಲಿಗರ ಕೃತ್ಯವಾಗಿದೆ. ಅವರು ಇದನ್ನು ದೇಶಭಕ್ತಿ ಎಂದು ಪರಿಗಣಿಸಿದ್ದಾರೆ. ಆಲ್ವಾರ್ ಗುಂಪು ಹಲ್ಲೆ ಮತ್ತು ಹತ್ಯೆಯ ಪ್ರಕರಣವನ್ನು ನಾನು ಖಂಡಿಸುತ್ತೇನೆ. ಆದರೆ ಈ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಬಿಜೆಪಿಗೆ ಸಾಧ್ಯವಾಗದು ಎಂದು ತಾನು ಭಾವಿಸುವುದಾಗಿ ಮಾಯಾವತಿ ಹೇಳಿದ್ದಾರೆ.

ಗುಂಪು ಹಲ್ಲೆ ಪ್ರಕರಣಗಳನ್ನು ಸೂಕ್ತವಾಗಿ ನಿರ್ವಹಿಸಲು ಕಾನೂನಿನ ಚೌಕಟ್ಟನ್ನು ರೂಪಿಸಲು ಸೋಮವಾರ ಗೃಹ ಸಚಿವಾಲಯ ಎರಡು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ್ದು, ಒಂದರ ಅಧ್ಯಕ್ಷತೆಯನ್ನು ರಾಜ್ ನಾಥ್ ಸಿಂಗ್ ವಹಿಸುವರು. ಕೇಂದ್ರ ಗೃಹ ಇಲಾಖೆಯ ಕಾರ್ಯದರ್ಶಿ ರಾಜೀವ್ ಗೌಬ ಇನ್ನೊಂದು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಆಲ್ವಾರ್ ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಶಿವಸೇನೆಯ ಸ್ಥಳೀಯ ಘಟಕದೊಂದಿಗೆ ಸಂಪರ್ಕದಲ್ಲಿದ್ದ ಇಬ್ಬರು ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೃತಪಟ್ಟಿದ್ದ ಅಕ್ಬರ್ ಖಾನ್‌ರನ್ನು ಆಸ್ಪತ್ರೆಗೆ ದಾಖಲಿಸಲು ಪೊಲೀಸರು ವಿಳಂಬಿಸಿದ್ದಾರೆ ಎಂಬ ದೂರಿನ ಬಗ್ಗೆ ತನಿಖೆ ನಡೆಸಲು ರಾಜಸ್ತಾನ ಪೊಲೀಸರು ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಮಧ್ಯೆ , ಖಾನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಜಸ್ತಾನ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುವಂತೆ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 28ರಂದು ನಡೆಸುವುದಾಗಿ ಸುಪ್ರೀಂಕೋರ್ಟ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News