ಆಘಾತ, ಗಾಯ ಸಾವಿಗೆ ಕಾರಣ: ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಉಲ್ಲೇಖ

Update: 2018-07-24 17:31 GMT

ಜೈಪುರ, ಜು.24: ಆಲ್ವಾರ್‌ನಲ್ಲಿ ಗುಂಪು ಹಲ್ಲೆಗೆ ಒಳಗಾದ ಅಕ್ಬರ್ ಖಾನ್ ಗಂಭೀರ ಗಾಯದಿಂದ ಆಗಿರುವ ತೀವ್ರ ಆಘಾತದಿಂದ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ತಿಳಿಸಲಾಗಿದೆ.

ಶನಿವಾರ ಬೆಳಿಗ್ಗೆ ಆಲ್ವಾರ್‌ನ ಲಾಲಾವಂಡಿ ಗ್ರಾಮದಲ್ಲಿ ಗೋ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಶಂಕೆಯಿಂದ 30 ವರ್ಷದ ಅಕ್ಬರ್ ಖಾನ್ ಮೇಲೆ ಗುಂಪೊಂದು ಹಲ್ಲೆ ನಡೆಸಿತ್ತು. ಪ್ರಕರಣದ ಕುರಿತು ಮ್ಯಾಜಿಸ್ಟ್ರೇಟ್ ತನಿಖೆಗೆ ರಾಜಸ್ತಾನ ಸರಕಾರ ನಿರ್ಧರಿಸಿದ್ದು ಈ ಬಗ್ಗೆ ಶೀಘ್ರ ಆದೇಶ ಹೊರಬೀಳಲಿದೆ ಎಂದು ಐಜಿಪಿ ಎನ್‌ಆರ್‌ಕೆ ರೆಡ್ಡಿ ತಿಳಿಸಿದ್ದಾರೆ. ರಾಜ್ಯದ ಗೃಹ ಸಚಿವ ಗುಲಾಬ್‌ಚಂದ್ ಕಟಾರಿಯಾ ಮತ್ತು ಮುಖ್ಯ ಕಾರ್ಯದರ್ಶಿ ಡಿ.ಬಿ.ಗುಪ್ತ ಲಾಲಾವಂಡಿ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಮಧ್ಯೆ, ಪ್ರಕರಣದ ಬಗ್ಗೆ ತನಿಖೆ ನಡೆಸಲು ಐಜಿಪಿ ನೇತೃತ್ವದಲ್ಲಿ ರಚಿಸಲಾದ ಸಮಿತಿ, ಪೊಲೀಸರ ಕಡೆಯಿಂದ ಲೋಪವಾಗಿರುವುದನ್ನು ಒಪ್ಪಿಕೊಂಡಿದೆ. ಪೊಲೀಸರು ದಕ್ಷತೆಯಿಂದ ಕಾರ್ಯ ನಿರ್ವಹಿಸಿದ್ದರೆ ಘಟನೆಯನ್ನು ತಪ್ಪಿಸಬಹುದಿತ್ತು ಎಂದು ಐಜಿಪಿ ತಿಳಿಸಿದ್ದಾರೆ.

ಗುಂಪು ಹಲ್ಲೆ ನಡೆಯುತ್ತಿದ್ದ ಸ್ಥಳಕ್ಕೆ ಹೋದ ಪೊಲೀಸರು ಅಕ್ಬರ್ ಖಾನ್‌ರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಯ ನೆಪದಲ್ಲಿ ಅವರನ್ನು ಮತ್ತೆ ಥಳಿಸಿದ್ದಾರೆ ಎಂಬ ಆರೋಪವಿದೆ. ಅಲ್ಲದೆ ಆರಾಮವಾಗಿ ಚಹಾ ಕುಡಿದು, ಹಸುವನ್ನು ಗೋಶಾಲೆಯೊಂದಕ್ಕೆ ಸೇರಿಸಿದ ಬಳಿಕ ಗಂಭೀರ ಗಾಯಗೊಂಡಿದ್ದ ಖಾನ್‌ರನ್ನು ಆಸ್ಪತ್ರೆಗೆ ಸೇರಿಸಲು ಮುಂದಾಗಿದ್ದಾರೆ. ಹೀಗೆ ಸುಮಾರು 3 ಗಂಟೆ ವಿಳಂಬಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಮಧ್ಯೆ, ಕರ್ತವ್ಯಲೋಪದ ಕಾರಣಕ್ಕೆ ಎಎಸ್‌ಐ ಮೋಹನ್ ಸಿಂಗ್‌ರನ್ನು ಅಮಾನತುಗೊಳಿಸಲಾಗಿದ್ದು ಮೂವರು ಕಾನ್‌ಸ್ಟೇಬಲ್‌ಗಳನ್ನು ಆಲ್ವಾರ್ ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ ಎಂದು ಐಜಿಪಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News