ಐಎನ್‌ಎಕ್ಸ್ ಮೀಡಿಯ ಹಗರಣ: ಪಿ.ಚಿದಂಬರಂ ನಿರೀಕ್ಷಣಾ ಜಾಮೀನು ವಿಚಾರಣೆ ನಾಳೆ

Update: 2018-07-24 17:36 GMT

ಹೊಸದಿಲ್ಲಿ, ಜು.24: ಐಎನ್‌ಎಕ್ಸ್ ಮೀಡಿಯ ಹಗರಣಕ್ಕೆ ಸಂಬಂಧಿಸಿದ ಹಣ ವಂಚನೆ ಪ್ರಕರಣದಲ್ಲಿ ಮಾಜಿ ವಿತ್ತ ಸಚಿವ ಹಾಕಿರುವ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆಯನ್ನು ದಿಲ್ಲಿ ನ್ಯಾಯಾಲಯ ಬುಧವಾರ ನಡೆಸಲಿದೆ.

ಮಂಗಳವಾರದಂದು ನ್ಯಾಯಾಧೀಶ ಎ.ಕೆ ಪಾಠಕ್ ಅವರು ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಮುಂದಾದಾಗ, ಅಡಿಶನಲ್ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಸರ್ವೋಚ್ಚ ನ್ಯಾಯಾಲಯದಲ್ಲಿ ವ್ಯಸ್ತವಾಗಿರುವುದರಿಂದ ಅರ್ಜಿಯ ವಿಚಾರಣೆ ದಿನದ ಅಂತ್ಯದಲ್ಲಿ ನಡೆಸುವಂತೆ ಮನವಿ ಮಾಡಿದ್ದರು. ಚಿದಂಬರಂ ಪರವಾಗಿ ವಾದಿಸುತ್ತಿರುವ ಹಿರಿಯ ವಕೀಲ ಕಪಿಲ್ ಸಿಬಲ್ ಮಧ್ಯಾಹ್ನದ ನಂತರ ತಾನು ಇರುವುದಿಲ್ಲ. ಹಾಗಾಗಿ ನ್ಯಾಯಾಲಯವು ಈ ಅರ್ಜಿಯ ವಿಚಾರಣೆಯನ್ನು ನಾಳೆಗೆ ಮುಂದೂಡುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು ಈ ಅರ್ಜಿಯ ವಿಚಾರಣೆಯನ್ನು ಸರಿಯಾದ ಸಮಯದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸದ್ಯ ನ್ಯಾಯಾಲಯದ ಮುಂದಿರುವ ಅರ್ಜಿಯೂ ಸಿಬಿಐ ದಾಖಲಿಸಿರುವ ಹಣ ವಂಚನಾ ಆರೋಪಕ್ಕೆ ಸಂಬಂಧಿಸಿದ್ದೇ ಆಗಿದ್ದು ಎರಡೂ ಪ್ರಕರಣಗಳೂ ಒಂದೇ ಆಗಿವೆ. ಈ ಅರ್ಜಿಯು ಜಾರಿ ನಿರ್ದೇಶನಾಲಯ ದಾಖಲಿಸಿರುವ ದೂರಿಗೆ ಸಂಬಂಧಿಸಿದ್ದಾರೆ, ಸಿಬಿಐ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಚಿದಂಬರಂ ಈಗಾಗಲೇ ಜಾಮೀನು ಪಡೆದುಕೊಂಡಿದ್ದಾರೆ ಎಂದು ಸಿಬಲ್ ಸ್ಪಷ್ಟಪಡಿಸಿದ್ದಾರೆ. ಜಾರಿ ನಿರ್ದೇಶನಾಯಲ ದಾಖಲಿಸಿರುವ ಹಣ ವಂಚನಾ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಚಿದಂಬರಮ್ ಸೋಮವಾರದಂದು ನ್ಯಾಯಾಲಯದ ಮೊರೆ ಹೋಗಿದ್ದರು.

ಐಎನ್‌ಎಕ್ಸ್ ಮೀಡಿಯ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ವರ್ಷ ಮೇ 15ರಂದು ಪಿ.ಚಿದಂಬರಮ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಕೂಡಾ ಕಳೆದ ವರ್ಷ ಚಿದಂಬರಮ್ ವಿರುದ್ಧ ದೂರು ದಾಖಲಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News