ಕಲಾಪದ ವೇಳೆ ಮಂಗಗಳ ಬಗ್ಗೆ ದೂರಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು

Update: 2018-07-24 17:49 GMT

ಹೊಸದಿಲ್ಲಿ, ಜು.24: ಹೊಸದಿಲ್ಲಿಯಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ದೇಶದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಅಧಿಕೃತ ನಿವಾಸಕ್ಕೂ ಕೋತಿಗಳು ದಾಳಿ ಮಾಡಿವೆ. ಈ ವಿಚಾರವನ್ನು ರಾಜ್ಯಸಭೆ ಕಲಾಪದ ವೇಳೆ ಪ್ರಸ್ತಾಪಿಸಿದ ನಾಯ್ಡು ಈ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ತಿಳಿಸಿದ್ದಾರೆ.

ಭಾರತೀಯ ರಾಷ್ಟ್ರೀಯ ಲೋಕದಳದ ಸದಸ್ಯ ರಾಮ ಕುಮಾರ್ ಕಶ್ಯಪ್ ಸದನದ ಶೂನ್ಯವೇಳೆಯಲ್ಲಿ ಕೋತಿಗಳ ಹಾವಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ. ಕೋತಿಗಳು ಗಿಡಗಳನ್ನು ಕಿತ್ತು ಹಾಕುತ್ತಿವೆ ಮತ್ತು ಒಣಗಲು ಹಾಕಿದ ಬಟ್ಟೆಗಳನ್ನು ಕೊಂಡೊಯ್ಯುತ್ತಿವೆ ಎಂದು ಅವರು ತಿಳಿಸಿದ್ದಾರೆ.

ಸಂಸತ್ ಸದಸ್ಯರೊಬ್ಬರ ಮೇಲೆ ಕೋತಿ ದಾಳಿ ನಡೆಸಿದ ಕಾರಣ ಅವರು ಸಮಿತಿಯ ಸಭೆಗೆ ಆಗಮಿಸುವಾಗ ತಡವಾಗಿತ್ತು. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಂತೆ ಸರಕಾರಕ್ಕೆ ಮನವಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.

 ಈ ವೇಳೆ ನಮ್ಮ ಮನೆಯ ಮೇಲೂ ಕೋತಿಗಳು ದಾಳಿ ಮಾಡುತ್ತಿದೆ ಎಂದು ತಿಳಿಸಿದ ವೆಂಕಯ್ಯ ನಾಯ್ಡು, ಸದ್ಯ ಸದನದಲ್ಲಿ ಮನೇಕಾ ಗಾಂಧಿ ಇಲ್ಲವಲ್ಲ ಎಂದು ಹಾಸ್ಯದ ಹೊನಲು ಹರಿಸಿದ್ದಾರೆ. ಕೋತಿಗಳ ಹಾವಳಿಗೆ ಏನಾದರೊಂದು ಪರಿಹಾರ ಕಂಡುಕೊಳ್ಳಲೇಬೇಕು ಎಂದು ಅವರು ಈ ವೇಳೆ ಸಂಸತ್ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯಲ್ ಅವರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News