×
Ad

ಕಪಿಲ್ ಸಿಬಲ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಅನುಮತಿ ನಿರಾಕರಿಸಿದ ಅಟಾರ್ನಿ ಜನರಲ್

Update: 2018-07-25 20:44 IST

ಹೊಸದಿಲ್ಲಿ,ಜು.25: ಮುಖ್ಯ ನ್ಯಾಯಮೂರ್ತಿಗಳಿಗೆ ವಾಗ್ದಂಡನೆ ವಿಷಯಕ್ಕೆ ಸಂಬಂಧಿಸಿದ ಅರ್ಜಿಯ ಕುರಿತು ವಾದಿಸುತ್ತಿದ್ದಾಗ ಪ್ರದರ್ಶಿಸಿದ್ದ ವೃತ್ತಿಪರ ದುರ್ವರ್ತನೆಗಾಗಿ ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮಕ್ಕೆ ಜರುಗಿಸಬೇಕೆಂಬ ನ್ಯಾಯವಾದಿ ಅಶೋಕ್ ಪಾಂಡೆ ಅವರ ಕೋರಿಕೆಗೆ ಅನುಮತಿಯನ್ನು ನೀಡಲು ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ನಿರಾಕರಿಸಿದ್ದಾರೆ.

 ನ್ಯಾಯಾಂಗ ನಿಂದನೆ ಕಾಯ್ದೆಯಂತೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯನ್ನೆಸಗುವ ಯಾವುದೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮವನ್ನು ಕೋರಿ ಅರ್ಜಿಯನ್ನು ಸಲ್ಲಿಸುವ ಮುನ್ನ ಅಟಾರ್ನಿ ಜನರಲ್ ಅವರ ಅನುಮತಿಯು ಅಗತ್ಯವಾಗಿದೆ.

ಅಯೋಧ್ಯೆ ಪ್ರಕರಣದ ವಿಚಾರಣೆಯನ್ನು 2019,ಜುಲೈವರೆಗೆ ಮುಂದೂಡಬೇಕೆಂಬ ತನ್ನ ಮನವಿ ತಿರಸ್ಕೃತಗೊಂಡ ನಂತರ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುವುದಾಗಿ ಬೆದರಿಕೆಯೊಡ್ಡುವ ಮೂಲಕ ಸಿಬಲ್ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಂಗ ನಿಂದನೆಯನ್ನೆಸಗಿದ್ದಾರೆ ಎಂದೂ ಪಾಂಡೆ ತನ್ನ ಅರ್ಜಿಯಲ್ಲಿ ಹೇಳಿದ್ದರು.

 ಪಾಂಡೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿರುವ ವಿಷಯಗಳು ತುಂಬ ಸಮಯದಿಂದ ಸಾರ್ವಜನಿಕ ವಲಯದಲ್ಲಿದ್ದವು ಮತ್ತು ಮುಖ್ಯ ನ್ಯಾಯಮೂರ್ತಿಗಳ ವಾಗ್ದಂಡನೆಯನ್ನು ರಾಜ್ಯಸಭೆಯ ಸಭಾಪತಿಗಳು ತಿರಸ್ಕರಿಸುವುದರೊಂದಿಗೆ ಅಂತ್ಯಗೊಂಡಿವೆ.ವಾಗ್ದಂಡನೆ ನಿರ್ಣಯವು ಕಾನೂನನಿಗನುಗುಣವಾಗಿ ತಾರ್ಕಿಕವಾಗಿ ಅಂತ್ಯವನ್ನು ಕಂಡಿದೆ. ಈ ಅಂಶಗಳು ನ್ಯಾಯಾಂಗ ನಿಂದನೆಗೆ ವಿಷಯವಾಗುತ್ತವೆ ಎಂದು ತಾನು ಭಾವಿಸಿಲ್ಲ. ಹೀಗಾಗಿ ಪಾಂಡೆಯವರ ಕೋರಿಕೆಗೆ ಅನುಮತಿಯನ್ನು ನಿರಾಕರಿಸಿದ್ದೇನೆ ಎಂದು ವೇಣುಗೋಪಾಲ್ ಹೇಳಿದ್ದಾರೆ.

ಮೌಖಿಕ ವಿಚಾರಣೆಯನ್ನು ನಡೆಸಬೇಕೆಂಬ ಪಾಂಡೆಯವರ ಕೋರಿಕೆಯನ್ನೂ ತಿರಸ್ಕರಿಸಿರುವ ಅವರು,ಇದಕ್ಕೆ ನ್ಯಾಯಾಂಗ ನಿಂದನೆ ಕಾಯ್ದೆಯಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ರಾಜ್ಯಸಭೆಯ ಸಭಾಪತಿಗಳು ವಾಗ್ದಂಡನೆ ನಿರ್ಣಯವನ್ನು ವಜಾಗೊಳಿಸಿದ್ದನ್ನು ಪ್ರಶ್ನಿಸಿದ್ದ ಇಬ್ಬರು ಸಂಸದರ ಪರ ವಾದಿಸುವಾಗ ಸಿಬಲ್ ಅವರು ವೃತ್ತಿಪರ ದುರ್ವರ್ತನೆಯನ್ನು ಪ್ರದರ್ಶಿಸಿದ್ದರು ಮತ್ತು ಉದ್ದೇಶಪೂರ್ವಕವಾಗಿ ನ್ಯಾಯಾಂಗ ನಿಂದನೆಯನ್ನೆಸಗಿದ್ದರು ಎಂಬ ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡು ಹಲವಾರು ಘಟನೆಗಳನ್ನು ಪಾಂಡೆ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News