ಲೋಕಪಾಲ ಶೋಧ ಸಮಿತಿಗೆ ಗಣ್ಯರ ಹೆಸರುಗಳನ್ನು ಪರಿಗಣಿಸಲಿರುವ ಪ್ರಧಾನಿ ನೇತೃತ್ವದ ಸಮಿತಿ

Update: 2018-07-25 15:16 GMT

ಹೊಸದಿಲ್ಲಿ,ಜು.25: ಲೋಕಪಾಲ ಶೋಧ ಸಮಿತಿಗೆ ಸದಸ್ಯರನ್ನಾಗಿ ನೇಮಿಸಲು ಗಣ್ಯರ ಹೆಸರುಗಳನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಮಿತಿಯು ಪರಿಗಣಿಸಬಹುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಬುಧವಾರ ಲೋಕಸಭೆಯಲ್ಲಿ ಲಿಖಿತ ಉತ್ತರವೊಂದರಲ್ಲಿ ತಿಳಿಸಿದರು.

ಕೆಲವು ವರ್ಗಗಳ ಸರಕಾರಿ ನೌಕರರ ವಿರುದ್ಧ ಭ್ರಷ್ಟಾಚಾರದ ಪ್ರಕರಣಗಳನ್ನು ಪರಿಶೀಲಿಸಲು ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತರನ್ನು ನೇಮಿಸಲು ಅವಕಾಶ ಕಲ್ಪಿಸುವ ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಯು 2013ರಲ್ಲಿ ಅಂಗೀಕಾರಗೊಂಡಿತ್ತು.

ಈ ವರ್ಷದ ಮಾ.1,ಎ.10 ಮತ್ತು ಜು.19ರಂದು ಪ್ರಧಾನಿ ನೇತೃತ್ವದ ಆಯ್ಕ್ಕೆ ಸಮಿತಿಯ ಮೂರು ಸಭೆಗಳು ನಡೆದಿವೆ ಎಂದೂ ಸಿಂಗ್ ತಿಳಿಸಿದರು.

ಎ.10ರಂದು ನಡೆದಿದ್ದ ಸಭೆಯ ಶಿಫಾರಸಿನಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರನ್ನು ‘ಗಣ್ಯ ವಕೀಲ’ರನ್ನಾಗಿ ಸಮಿತಿಗೆ ನೇಮಕಗೊಳಿಸಿದ್ದರು. ಹಿರಿಯ ನ್ಯಾಯವಾದಿ ಪಿ.ಪಿ.ರಾವ್ ಅವರ ನಿಧನದಿಂದಾಗಿ ಈ ಸ್ಥಾನವು ತೆರವುಗೊಂಡಿತ್ತು.

ಆಯ್ಕೆ ಸಮಿತಿಯು ತನ್ನ ಮುಂದಿನ ಸಭೆಯಲ್ಲಿ ಶೋಧ ಸಮಿತಿಯ ಸದಸ್ಯರನ್ನಾಗಿ ನೇಮಕಗೊಳಿಸಲು ಶಾಸನಬದ್ಧ ಮಾನದಂಡಗಳಿಗೆ ಅನುಗುಣವಾಗಿ ಅರ್ಹ ಗಣ್ಯ ವ್ಯಕ್ತಿಗಳ ಹೆಸರುಗಳನ್ನು ಪರಿಗಣಿಸಲು ಉದ್ದೇಶಿಸಿದೆ ಎಂದು ಸಿಂಗ್ ತಿಳಿಸಿದರು.

ಎಂಟು ಸದಸ್ಯರ ಶೋಧ ಸಮಿತಿಯು ಲೋಕಪಾಲ ಮತ್ತು ಅದರ ಸದಸ್ಯರ ನೇಮಕಕ್ಕಾಗಿ ಹೆಸರುಗಳನ್ನು ಶಿಫಾರಸು ಮಾಡುವ ಹೊಣೆಗಾರಿಕೆಯನ್ನು ಹೊಂದಿದೆ.

ಮಂಗಳವಾರ ಲೋಕಪಾಲ ನೇಮಕ ಮಾಡುವಲ್ಲಿ ವಿಳಂಬ ಕುರಿತ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸರ್ವೋಚ್ಚ ನ್ಯಾಯಾಲಯವು,ಶೋಧ ಸಮಿತಿಗೆ ಸದಸ್ಯರನ್ನು ನೇಮಕ ಮಾಡುವಲ್ಲಿ ಕೇಂದ್ರದ ಉದಾಸೀನತೆಗಾಗಿ ಅತೃಪ್ತಿಯನ್ನು ವ್ಯಕ್ತಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News