ಭಾರತದಲ್ಲಿರುವ ರೊಹಿಂಗ್ಯಾಗಳ ಗಡಿಪಾರಿಗೆ ಬಾಂಗ್ಲಾ ಜೊತೆ ಮಾತುಕತೆ: ರಾಜ್ ನಾಥ್ ಸಿಂಗ್

Update: 2018-07-25 15:47 GMT

ಹೊಸದಿಲ್ಲಿ, ಜು.25: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ರೊಹಿಂಗ್ಯಾಗಳ ಗಡಿಪಾರು ವಿಷಯಕ್ಕೆ ಕುರಿತಾಗಿ ಬಾಂಗ್ಲಾದೇಶದ ಜೊತೆ ಮಾತುಕತೆ ನಡೆಸಲಾಗುತ್ತಿದೆ ಎಂದು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.

ಜುಲೈ 30ರಂದು ಅಸ್ಸಾಂನಲ್ಲಿ ನೆಲೆಸಿರುವ 52 ಅಕ್ರಮ ಬಾಂಗ್ಲಾದೇಶಿಗಳನ್ನು ಗಡಿಪಾರು ಮಾಡಲಾಗುವುದು ಎಂದು ಸಹಾಯಕ ಗೃಹ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ಅಗತ್ಯ ಬಿದ್ದಲ್ಲಿ ರೊಹಿಂಗ್ಯಾ ಸಂತ್ರಸ್ತರ ಗಡಿಪಾರು ವಿಷಯದಲ್ಲಿ ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್ ಜೊತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮಾತುಕತೆ ನಡೆಸಲಿದೆ ಎಂದು ಸಿಂಗ್ ತಿಳಿಸಿದ್ದಾರೆ. ಅಕ್ರಮ ವಲಸಿಗರನ್ನು ಗುರುತಿಸಿ ಅವರಿಂದ ಬಯೋಮೆಟ್ರಿಕ್‌ಗಳನ್ನು ಪಡೆದುಕೊಳ್ಳುವಂತೆ ಮತ್ತು ಭವಿಷ್ಯದಲ್ಲಿ ಅವರು ಭಾರತೀಯ ನಾಗರಿಕರು ಎಂದು ಘೊಷಿಸಿಕೊಳ್ಳಲು ಯಾವುದೇ ರೀತಿಯ ಆಧಾರಗಳು ಉಳಿಯದಂತೆ ನೋಡಿಕೊಳ್ಳುವಂತೆ ರಾಜ್ಯ ಸರಕಾರಗಳಿಗೆ ಸಲಹೆಯನ್ನು ನೀಡಿರುವುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ರೊಹಿಂಗ್ಯಾ ಸಂತ್ರಸ್ತರ ವಿಷಯಕ್ಕೆ ಸಂಬಂಧಿಸಿದಂತೆ ಈಗಾಗಲೇ ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದ ಜೊತೆ ಮಾತುಕತೆ ನಡೆಸಿರುವುದಾಗಿ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ. ವಿದೇಶಿಗರು ಕಾಯ್ದೆಯಡಿಯಲ್ಲಿ ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ವ್ಯಕ್ತಿಗಳನ್ನು ಪತ್ತೆಮಾಡಿ ಅವರನ್ನು ಗಡಿಪಾರು ಮಾಡುವ ಹಕ್ಕು ಸರಕಾರಕ್ಕಿದೆ ಎಂದು ರಿಜಿಜು ತಿಳಿಸಿದ್ದಾರೆ. ರೊಂಹಿಗ್ಯಾಗಳು ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದಾರೆ ಎಂದ ರಿಜಿಜು ಸದ್ಯ ಅವರು ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ಭದ್ರತಾ ಸಂಸ್ಥೆಯ ವರದಿಯ ಪ್ರಕಾರ, ಸದ್ಯ ರೊಹಿಂಗ್ಯಾಗಳು ಜಮ್ಮು ಮತ್ತು ಕಾಶ್ಮೀರ, ಆಂಧ್ರ ಪ್ರದೇಶ, ತೆಲಂಗಾಣ, ಪಶ್ಚಿಮ ಉತ್ತರ ಪ್ರದೇಶ, ದಿಲ್ಲಿ ಮತ್ತು ಜೈಪುರದಲ್ಲಿ ನೆಲೆಸಿದ್ದಾರೆ. ಸದ್ಯ ಗಡಿಪಾರು ಮಾಡಲು ಉದ್ದೇಶಿಸಲಾಗಿರುವ 52 ಮಂದಿಯ ಗುರುತನ್ನು ಬಾಂಗ್ಲಾದೇಶ ಒಪ್ಪಿಕೊಂಡಿದ್ದು, ಅವರ ಗಡಿಪಾರಿಗೆ ಹಸಿರು ನಿಶಾನೆ ನೀಡಿದೆ. ಹಾಗಾಗಿ ಜುಲೈ 30ರ ಬೆಳಿಗ್ಗೆ 11 ಗಂಟೆಗೆ ಅಸ್ಸಾಂನ ಮಂಕಚರ್ ಐಪಿಸಿಯಿಂದ ಈ 52 ಮಂದಿಯನ್ನು ತಮ್ಮ ದೇಶಕ್ಕೆ ಮರಳಿ ಕಳುಹಿಸಿಕೊಡಲಾಗುವುದು ಎಂದು ರಿಜಿಜು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News