ಜಯಲಲಿತಾ ಎಂದೂ ಗರ್ಭಿಣಿಯಾಗಿರಲಿಲ್ಲ: ಹೈಕೋರ್ಟ್‌ನಲ್ಲಿ ತಮಿಳು ನಾಡು ಸರಕಾರದ ನಿವೇದನೆ

Update: 2018-07-25 16:14 GMT

ಚೆನ್ನೈ,ಜು.25: ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರು ಎಂದೂ ಗರ್ಭಿಣಿಯಾಗಿರಲಿಲ್ಲ ಎಂದು ಮದ್ರಾಸ್ ಉಚ್ಚ ನ್ಯಾಯಾಲಯಕ್ಕೆ ತಿಳಿಸಿರುವ ತಮಿಳುನಾಡು ಸರಕಾರವು ತನ್ನ ಹೇಳಿಕೆಗೆ ಸಮರ್ಥನೆಯಾಗಿ ವೀಡಿಯೊ ತುಣುಕೊಂದನ್ನು ಸಲ್ಲಿಸಿದೆ. ತಾನು ಜಯಲಲಿತಾರ ಪುತ್ರಿ ಎಂಬ ಬೆಂಗಳೂರು ನಿವಾಸಿ ಅಮೃತಾರ ಪ್ರತಿಪಾದನೆಯನ್ನು ಈ ವೀಡಿಯೋ ಅಲ್ಲಗಳೆದಿದೆ ಎಂದು ಅದು ಹೇಳಿದೆ.

 ರಾಜ್ಯದ ಅಡ್ವೊಕೇಟ್ ಜನರಲ್ ವಿಜಯ ನಾರಾಯಣನ್ ಅವರು ನ್ಯಾ.ಎಸ್.ವೈದ್ಯನಾಥನ್ ಅವರಿಗೆ ಈ ವೀಡಿಯೊ ತುಣುಕನ್ನು ಸಲ್ಲಿಸಿದರು.

 1980,ಆ.14ರಂದು ತಾನು ಜಯಲಲಿತಾರಿಗೆ ಜನಿಸಿದ್ದಾಗಿ ಅರ್ಜಿದಾರ ಮಹಿಳೆ ಹೇಳಿಕೊಂಡಿದ್ದಾರಾದರೂ,ಅದಕ್ಕೆ ಕೇವಲ ಒಂದು ತಿಂಗಳು ಮೊದಲು ಜಯಲಲಿತಾ 27ನೇ ಫಿಲ್ಮಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಈ ವೀಡಿಯೊ ಅವರು ಗರ್ಭಿಣಿಯಾಗಿದ್ದರು ಎಂಬ ಯಾವುದೇ ಕುರುಹನ್ನು ತೋರಿಸುತ್ತಿಲ್ಲ ಎಂದು ನಾರಾಯಣನ್ ಹೇಳಿದರು.

ತಾನು ಜನಿಸಿದ ತಕ್ಷಣ ತನ್ನನ್ನು ದತ್ತಕ ನೀಡಲಾಗಿತ್ತು ಮತ್ತು ಬೆಂಗಳೂರಿನಲ್ಲಿರುವ ಜಯಲಲಿತಾರ ಸೋದರಿ ಶೈಲಜಾ ತನ್ನನ್ನು ಬೆಳೆಸಿದ್ದರು ಎಂದು ತನ್ನ ಅರ್ಜಿಯಲ್ಲಿ ತಿಳಿಸಿರುವ ಅಮೃತಾ,ಜಯಲಲಿತಾ ತನ್ನ ತಾಯಿ ಎನ್ನುವುದನ್ನು ಸಿದ್ಧಪಡಿಸಲು ಡಿಎನ್‌ಎ ಪರೀಕ್ಷೆಗಾಗಿ ಕೋರಿಕೊಂಡಿದ್ದಾರೆ. 2016,ಡಿಸೆಂಬರ್‌ನಲ್ಲಿ ಜಯಯಲಿತಾರ ನಿಧನದ ತಿಂಗಳುಗಳ ಬಳಿಕ ಈ ಅರ್ಜಿಯನ್ನು ದಾಖಲಿಸಿರುವ ಅಮೃತಾ ತನ್ನ ಸಾಕುತಂದೆಯು ಸಾಯುವ ಕೆಲವೇ ಕ್ಷಣಗಳ ಮುನ್ನ ತನ್ನ ಜನ್ಮರಹಸ್ಯವನ್ನು ಬಹಿರಂಗಗೊಳಿಸಿದ್ದರು ಎಂದು ತಿಳಿಸಿದ್ದಾರೆ.

  ಜಯಲಲಿತಾರ ಅವಶೇಷಗಳನ್ನು ಹೊರಕ್ಕೆ ತೆಗೆಯಲು ಮತ್ತು ಅವರು ಸೇರಿದ್ದ ಅಯ್ಯಂಗಾರ್ ಸಮುದಾಯದ ಸಂಪ್ರದಾಯಗಳ ಪ್ರಕಾರ ಅಂತ್ಯಸಂಸ್ಕಾರ ನಡೆಸಲು ನಿರ್ದೇಶ ಕೋರಿ ಅಮೃತಾ ನ್ಯಾಯಾಲಯದ ಮೆಟ್ಟಿಲನ್ನೇರಿದ್ದಾರೆ.

ಅಮೃತಾರ ಹೇಳಿಕೆಯನ್ನು ತಿರಸ್ಕರಿಸಿದ ನಾರಾಯಣನ್,ಆಕೆ ಕಪೋಲಕಲ್ಪಿತ ಕಥೆಯನ್ನು ಹೇಳುತ್ತಿದ್ದಾರೆ ಮತ್ತು ದಿವಂಗತ ನಾಯಕಿಗೆ ಅಗೌರವವನ್ನುಂಟು ಮಾಡುತ್ತಿದ್ದಾರೆ ಎಂದು ಹೇಳಿದರು.

 ಜಯಲಲಿತಾರ ತಂದೆ ಜಯರಾಮ ಅವರ ನಿಧನದ ಬಳಿಕ ಶೈಲಜಾ ಜನಿಸಿದ್ದರಿಂದ ಜಯಲಲಿತಾ ಕುಟುಂಬವು ಆಕೆಯನ್ನು ತ್ಯಜಿಸಿತ್ತು ಎಂಬ ಅಮೃತಾರ ಹೇಳಿಕೆಯನ್ನು ನಿರಾಕರಿಸಿದ ನಾರಾಯಣನ್,ತಾನು ಜಯಲಲಿತಾರ ಪುತ್ರಿ ಎನ್ನುವುದನ್ನು ರುಜುವಾತುಗೊಳಿಸುವ ಯಾವುದೇ ದಾಖಲೆಗಳನ್ನು ಅರ್ಜಿದಾರರು ಈವರೆಗೆ ಸಲ್ಲಿಸಿಲ್ಲ ಎಂದು ವಾದಿಸಿದರು.

ತನ್ನ ತಂಗಿಯೆಂದು ಹೇಳಿಕೊಳ್ಳುತ್ತಿರುವುದಕ್ಕಾಗಿ ಜಯಲಲಿತಾ ಅವರು ಶೈಲಜಾ ವಿರುದ್ಧ 2014ರಲ್ಲಿ ಮಾನನಷ್ಟ ಪ್ರಕರಣವನ್ನೂ ದಾಖಲಿಸಿದ್ದರು ಎಂದು ಅವರು ತಿಳಿಸಿದರು.

 ಅರ್ಜಿದಾರರ ಹೇಳಿಕೆ ಸೇರಿದಂತೆ ಜಯಲಲಿತಾರ ಬದುಕು ಮತ್ತು ಸಾವಿನ ಸುತ್ತಲಿನ ಪ್ರತಿಯೊಂದೂ ಪ್ರಶ್ನಾರ್ಥಕ ಚಿಹ್ನೆಯಾಗಿಯೇ ಉಳಿದುಕೊಂಡಿದೆ ಎಂದು ನ್ಯಾಯಾಧೀಶರು ಅಭಿಪ್ರಾಯ ವ್ಯಕ್ತಪಡಿಸಿದರು.

ನ್ಯಾಯಾಲಯವು ವಿಚಾರಣೆಯನ್ನು ಒಂದು ವಾರ ಮುಂದೂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News