ಟೆಲಿಫೋನ್ ಎಕ್ಸ್‌ಚೇಂಜ್ ಹಗರಣ ಮಾರನ್ ಸಹೋದರರ ಬಿಡುಗಡೆ ತೀರ್ಪು ತಳ್ಳಿ ಹಾಕಿದ ಮದ್ರಾಸ್ ಹೈಕೋರ್ಟ್

Update: 2018-07-25 15:57 GMT

ಚೆನ್ನೈ, ಜು. 24: ದಶಕಗಳ ಹಿಂದಿನ ಕಾನೂನಬಾಹಿರ ಟೆಲಿಫೋನ್ ಎಕ್ಸ್‌ಚೇಂಜ್ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ದಯಾನಿಧಿ ಮಾರನ್ ಹಾಗೂ ಅವರ ಹಿರಿಯ ಸಹೋದರ ಕಲಾನಿಧಿ ಮಾರನ್ ಸಹಿತ 7 ಮಂದಿ ಆರೋಪಿಗಳನ್ನು ಬಿಡುಗಡೆಗೊಳಿಸಿ ವಿಶೇಷ ನ್ಯಾಯಾಲಯ ನೀಡಿದ ಆದೇಶ ಪ್ರಶ್ನಿಸಿ ಸಿಬಿಐ ಸಲ್ಲಿಸಿದ ಮೇಲ್ಮನವಿ ವಿರುದ್ಧ ಮಾರನ್ ಸಹೋದರರ ಆಕ್ಷೇಪವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

 ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ. ಜಯಚಂದ್ರನ್ ಪ್ರಕರಣವನ್ನು ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಹಿಂದೆ ಕಳುಹಿಸಿದ್ದಾರೆ. ವಿಚಾರಣೆಯನ್ನು ಮುಂದುವರಿಸುವಂತೆ ಹಾಗೂ 12 ವಾರಗಳ ಒಳಗೆ ಆರೋಪ ರೂಪಿಸುವಂತೆ ನ್ಯಾಯಾಲಯಕ್ಕೆ ನಿರ್ದೇಶಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರನ್ ಸಹೋದರರು ಸೇರಿದಂತೆ ಎಲ್ಲ 7 ಮಂದಿ ಆರೋಪಿಗಳು ಇಲ್ಲಿನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ವಿಚಾರಣೆ ಎದುರಿಸಲಿದ್ದಾರೆ. ಆರೋಪಿಗಳ ವಿರುದ್ಧದ ಆರೋಪಗಳನ್ನು ಸಾಬೀತು ಮಾಡುವ ಯಾವುದೇ ಮೇಲ್ನೋಟದ ಪುರಾವೆಗಳು ಇಲ್ಲ. ಆದುದರಿಂದ ಎಲ್ಲ 7 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಮಾರ್ಚ್ 14ರಂದು ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ನಟರಾಜನ್ ಹೇಳಿದ್ದರು.

 ಸಿಬಿಐ ಪ್ರಕಾರ ದಯಾನಿಧಿ ಮಾರನ್ ಜೂನ್ 2004ರಿಂದ ಡಿಸೆಂಬರ್ 2006ರ ವರೆಗೆ ಕೇಂದ್ರದ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನದ ಸಚಿವರಾಗಿದ್ದಾಗ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಿದ್ದರು. ಚೆನ್ನೈಯಲ್ಲಿರುವ ತನ್ನ ನಿವಾಸದಲ್ಲಿ ಖಾಸಗಿ ಟೆಲಿಫೋನ್ ಎಕ್ಸ್‌ಚೇಂಜ್ ಸ್ಥಾಪಿಸಿದ್ದರು. ಕಲಾನಿಧಿ ಮಾರನ್ ಮಾಲಕತ್ವದ ಸನ್ ನೆಟವರ್ಕ್ ಒಳಗೊಂಡ ವ್ಯವಹಾರ ವರ್ಗಾವಣೆಗೆ ಇದನ್ನು ಬಳಸಿಕೊಂಡಿದ್ದರು ಎಂದಿದೆ. ಇದರಿಂದ ದೇಶದ ಬೊಕ್ಕಸಕ್ಕೆ 1.78 ಕೋ. ರೂ. ನಷ್ಟ ಉಂಟಾಗಿದೆ. ಇಲ್ಲಿನ ಬೋಟ್ ಕ್ಲಬ್ ಹಾಗೂ ಗೋಪಾಲಪುರಂ ನಲ್ಲಿ 700ಕ್ಕೂ ಅಧಿಕ ಟೆಲಿಕಾಂ ಲೈನ್‌ನಗಳನ್ನು ಸ್ಥಾಪಿಸಲಾಗಿತ್ತು ಎಂದು ಸಿಬಿಐ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News