ಹಕ್ಕುಚ್ಯುತಿ ಮಂಡನೆ ನೋಟಿಸ್ ಪರಿಗಣಿಸಲಾಗುತ್ತಿದೆ: ಲೋಕಸಭಾ ಸ್ಪೀಕರ್

Update: 2018-07-25 16:06 GMT

ಹೊಸದಿಲ್ಲಿ, ಜು. 24: ರಫೇಲ್ ಒಪ್ಪಂದ ಕುರಿತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿದ ಹೇಳಿಕೆ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ ಹಕ್ಕುಚ್ಯುತಿ ಮಂಡನೆ ನೋಟಿಸ್ ಪರಿಗಣಿಸಲಾಗುತ್ತಿದೆ ಎಂದು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ಗುರುವಾರ ತಿಳಿಸಿದ್ದಾರೆ.

 ಜುಲೈ 20ರಂದು ನಡೆದ ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆ ಸಂದರ್ಭ ರಫೇಲ್ ಒಪ್ಪಂದದ ಕುರಿತು ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನೋಟಿಸ್ ಸಲ್ಲಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಹಾಗೂ ನಿರ್ಮಲಾ ಸೀತಾರಾಮನ್ ವಿರುದ್ಧ ಐವರು ಸದಸ್ಯರು ನೋಟಿಸ್ ಸಲ್ಲಿಸಿದ್ದಾರೆ ಎಂದು ಮಹಾಜನ್ ಹೇಳಿದ್ದಾರೆ. ‘‘ಇದು (ನೋಟಿಸ್) ಪರಿಗಣನೆಯಲ್ಲಿದೆ.’’ ಎಂದು ಮಹಾಜನ್ ಶೂನ್ಯ ವೇಳೆಯಲ್ಲಿ ಬಿಜೆಪಿಯ ಕೆಲವು ಸದಸ್ಯರ ಪ್ರತಿಭಟನೆಯ ನಡುವೆ ಹೇಳಿದರು. ಶೂನ್ಯ ವೇಳೆಯಲ್ಲಿ ಮೋದಿ ಹಾಗೂ ಸೀತಾರಾಮನ್ ವಿರುದ್ಧದ ತಮ್ಮ ನೋಟಿಸ್‌ನ ಬಗ್ಗೆ ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜ್ಯೋತಿರಾದಿತ್ಯ ಸಿಂಧ್ಯ ಪ್ರಶ್ನಿಸಿದಾಗ ಮಹಾಜನ್ ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News