×
Ad

ಹಿಂಸಾಚಾರದ ಬಳಿಕ ಮುಂಬೈ ಬಂದ್ ಹಿಂದೆಗೆದುಕೊಂಡ ಮರಾಠಾ ಗುಂಪುಗಳು

Update: 2018-07-25 23:05 IST

ಮುಂಬೈ,ಜು.25: ಮರಾಠಾ ಸಮುದಾಯಕ್ಕೆ ಮೀಸಲಾತಿಯ ಬೇಡಿಕೆಯನ್ನು ಮುಂದಿರಿಸಿಕೊಂಡು ಬುಧವಾರ ಮುಂಬೈ ಬಂದ್‌ಗೆ ಕರೆ ನೀಡಿದ್ದ ಮರಾಠಾ ಕ್ರಾಂತಿ ಮೋರ್ಚಾ ಸಮನ್ವಯ ಸಮಿತಿಯು ಮಧ್ಯಾಹ್ನ ತನ್ನ ಪ್ರತಿಭಟನೆಯನ್ನು ಹಿಂದೆಗೆದುಕೊಂಡಿದ್ದು,ರಾಜ್ಯದ ಇತರ ಭಾಗಗಳಲ್ಲಿಯೂ ಇದನ್ನು ಅನುಸರಿಸುವಂತೆ ಪ್ರತಿಭಟನಾಕಾರರಿಗೆ ಕರೆಯನ್ನು ನೀಡಿದೆ. ಆದರೆ ಮುಖ್ಯಮಂತ್ರಿ ಅಥವಾ ಸಕಾರದ ಪ್ರತಿನಿಧಿಗಳು ತಮ್ಮನ್ನು ಭೇಟಿಯಾಗಿ ಬೇಡಿಕೆಯನ್ನು ಒಪ್ಪಿಕೊಳ್ಳುವವರೆಗೆ ಮುಷ್ಕರವನ್ನು ನಿಲ್ಲಿಸುವುದಿಲ್ಲ ಎಂದು ನವಿ ಮುಂಬೈ ಮತ್ತು ಥಾಣೆಗಳಲ್ಲಿಯ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.

ಘಾಟ್‌ಕೋಪರ್-ಮಾಂಖುರ್ದ್ ರಸ್ತೆಯಲ್ಲಿ ಬೆಸ್ಟ್ ಬಸ್ಸೊಂದಕ್ಕೆ ಬೆಂಕಿ ಹಚ್ಚುವಿಕೆ ಮತ್ತು ನವಿ ಮುಬೈನ ಕಳಂಬೋಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ತಿರುಗಿ ಬಿದ್ದಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರಿಂದ ಗಾಳಿಯಲ್ಲಿ ಗುಂಡು ಹಾರಾಟ ಮತ್ತು ಲಾಠಿಪ್ರಹಾರ ಸೇರಿದಂತೆ ಮುಂಬೈ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಹಲವಾರು ಹಿಂಸಾಚಾರದ ಘಟನೆಗಳ ಹಿನ್ನೆಲೆಯಲ್ಲಿ ಬಂದ್ ಕರೆಯನ್ನು ಹಿಂದೆಗೆದುಕೊಳ್ಳಲಾಗಿದೆ. ಗುಂಪು ಹಿಂಸಾಚಾರದಲ್ಲಿ 4-5 ಜನರು ಗಾಯಗೊಂಡಿದ್ದಾರೆ ಎಂದೂ ವರದಿಯಾಗಿದೆ.

ನವಿ ಮುಂಬೈ ಮತ್ತು ಥಾಣೆಗಳಲ್ಲಿಯ ಮರಾಠಾ ನಾಯಕರು ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳಲು ಒಪ್ಪಿಕೊಂಡಿದ್ದರಾದರೂ ತಳಮಟ್ಟದ ಪ್ರತಿಭಟನಾಕಾರರಿಂದ ತೀವ್ರ ಪ್ರತಿರೋಧ ವ್ಯಕ್ತವಾಗಿದೆ.

ಪ್ರತಿಭಟನಾಕಾರರು ಭಾರೀ ಸಂಖ್ಯೆಯಲ್ಲಿ ಸೇರಿದ್ದರಿಂದ ಸಯನ್-ಪನವೇಲ್ ಹೆದ್ದಾರಿಯಲ್ಲಿ ಗಂಟೆಗಟ್ಟಲೆ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಪ್ರತಿಭಟನೆಯು ಭಾರೀ ಯಶಸ್ವಿಯಾಗಿದೆ ಎಂದು ಹೇಳಿರುವ ಸಮಿತಿಯ ಸದಸ್ಯ ವೀರೇಂದ್ರ ಪವಾರ್ ಅವರು, ಸಮಿತಿಯ ಕಾರ್ಯಕರ್ತರು ಯಾವುದೇ ದಾಂಧಲೆಯನ್ನು ನಡೆಸಿಲ್ಲ. ನಮ್ಮ ವರ್ಚಸ್ಸಿಗೆ ಮಸಿ ಬಳಿಯಲು ರಾಜಕೀಯ ಸಂಚು ನಡೆದಿದೆ ಎಂದು ಶಂಕಿಸಿದ್ದೇವೆ. ಯಾವುದೇ ಹಿಂಸಾಚಾರವಿಲ್ಲದೆ ನಾವು 58 ವೌನ ಜಾಥಾಗಳನ್ನು ನಡೆಸಿದ್ದೇವೆ ಎಂದರು. ಬಂದ್‌ಗೆ ರಾಜ್ಯ ಸರಕಾರವೇ ಹೊಣೆಯಾಗಿದೆ ಎಂದು ಅವರು ಹೇಳಿದರು.

ಬೆಳಿಗ್ಗೆ ಶಾಂತಿಯುತವಾಗಿ ಆರಂಭಗೊಂಡಿದ್ದ ಬಂದ್ ಕ್ರಮೇಣ ಕಾವು ಪಡೆದುಕೊಂಡಿತ್ತು. ಥಾಣೆ, ಜೋಗೇಶ್ವರಿ, ಕಲ್ಯಾಣ್, ಮುಲುಂದ್, ಘನ್ಸೋಲಿ, ಲಾಲಬಾಗ್ ಮತ್ತಿತರ ಕಡೆಗಳಲ್ಲಿ ಸಂಚಾರಕ್ಕೆ ತಡೆ,ಕಲ್ಲುತೂರಾಟ,ಬಲವಂತದಿಂದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿರುವ ಘಟನೆಗಳು ವರದಿಯಾಗಿವೆ. ಪ್ರತಿಭಟನಾಕಾರರು ಹಲವೆಡೆ ರೈಲುಗಳ ಸಂಚಾರಕ್ಕೂ ತಡೆಯೊಡ್ಡಿದ್ದರು.ಪನವೇಲ್‌ನಲ್ಲಿಯೂ ಪ್ರತಿಭಟನಾಕಾರರು ರಾಸ್ತಾ ರೋಕೊ ನಡೆಸಿದ್ದು,ಹಳೆಯ ಮುಂಬೈ-ಪುಣೆ ಮತ್ತು ಮುಂಬೈ-ಗೋವಾ ಮಾರ್ಗಗಳಲ್ಲಿ ವಾಜಹನಗಳ ಸಂಚಾರ ಸ್ಥಗಿತಗೊಂಡಿತ್ತು. ಪಾಲ್ಘರ್ ಜಿಲ್ಲೆಯೂ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು.

ಭದ್ರತೆಗಾಗಿ 30,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News