ಸರಕಾರಿ ಕಚೇರಿಗಳು ದಿವ್ಯಾಂಗ ಸ್ನೇಹಿಯಾಗಿರಬೇಕು: ಸುಪ್ರೀಂ ಕೋರ್ಟ್

Update: 2018-07-25 17:49 GMT

ಹೊಸದಿಲ್ಲಿ, ಜು.25: ಸರಕಾರಿ ಕಚೇರಿಗಳು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳೂ ಸುಲಭವಾಗಿ ಬಳಸುವಂತೆ ದಿವ್ಯಾಂಗಸ್ನೇಹಿಯಾಗಿರುವಂತೆ ಮಾಡಬೇಕು ಎಂಬ ತನ್ನ ಕಳೆದ ವರ್ಷದ ಆದೇಶವನ್ನು ನಿರ್ಲಕ್ಷಿಸಿದ ಕಾರಣಕ್ಕೆ ಸರ್ವೋಚ್ಚ ನ್ಯಾಯಾಲಯ ಮಂಗಳವಾರದಂದು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತನ್ನ ಆದೇಶವನ್ನು ಪಾಲಿಸದ ರಾಜ್ಯ ಸರಕಾರಗಳಿಗೂ ಬಿಸಿ ಮುಟ್ಟಿಸಿದ ನ್ಯಾಯಾಲಯ ಆಯಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ಉತ್ತರ ನೀಡಬೇಕಾದೀತು ಎಂದು ಎಚ್ಚರಿಸಿದೆ. 2017ರ ಡಿಸೆಂಬರ್ 15ರಂದು ನೀಡಿರುವ ಆದೇಶದಂತೆ ಇಲ್ಲಿಯವರೆಗೆ ತೆಗೆದುಕೊಳ್ಳಲಾಗಿರುವ ಕ್ರಮಗಳು ಮತ್ತು ಅವುಗಳನ್ನು ಸಂಪೂರ್ಣಗೊಳಿಸಲು ಬೇಕಾಗುವ ಸಮಯದ ವಿವರಣೆಯನ್ನು ನೀಡುವ ಅಫಿದಾವಿತ್ ಅನ್ನು ನಾಲ್ಕು ವಾರಗಳ ಒಳಗಾಗಿ ನೀಡುವಂತೆ ನ್ಯಾಯಾಧೀಶ ಎ.ಕೆ ಸಿಕ್ರಿ ಮತ್ತು ಅಶೋಕ್ ಭೂಷಣ್ ಅವರ ಪೀಠ ಸೂಚಿಸಿದೆ.

2017ರ ಡಿಸೆಂಬರ್ 15ರ ತೀರ್ಪಿನಲ್ಲಿ ನಾವು ಹೊಸತೇನನ್ನೂ ಹೇಳಿಲ್ಲ. ಅದು ನಿಮ್ಮದೇ (ಕೇಂದ್ರ) ಕಾನೂನು ಮತ್ತು ಅದನ್ನು ಅನುಷ್ಠಾನಕ್ಕೆ ತನ್ನಿ ಎಂದಷ್ಟೇ ನಾವು ಹೇಳಿದ್ದೇವೆ. ನಾವು ಸರಕಾರ ನಡೆಸುತ್ತಿಲ್ಲ. ಕಾನೂನು ಪಾಲನೆ ಮಾಡಬೇಕಾದವರು ನೀವು ಎಂದು ನ್ಯಾಯಾಲಯ ಪೀಠ ತಿಳಿಸಿದೆ. ಶ್ರೇಷ್ಠ ನ್ಯಾಯಾಲಯ ಆದೇಶ ಪಾಲಿಸಲು ಈಗಾಗಲೇ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ ಸುಪ್ರೀಂ ಕೋರ್ಟ್‌ನ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿಂಕಿ ಆನಂದ್, ಈ ಬಗ್ಗೆ ನಾಲ್ಕು ವಾರಗಳಲ್ಲಿ ವರದಿಯನ್ನು ಒಪ್ಪಿಸುವುದಾಗಿ ತಿಳಿಸಿದ್ದಾರೆ. ನ್ಯಾಯಾಂಗವನ್ನು ದಿವ್ಯಾಂಗರಿಗೆ, ಮುಖ್ಯವಾಗಿ ದೃಷ್ಟಿವಿಕಲಚೇತನರಿಗೆ ನೆರವಾಗುವಂತೆ ಮಾಡುವಂತೆ ಹಾಕಲಾದ ಅರ್ಜಿಯ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ, ಈ ಸಂಬಂಧ ಎಲ್ಲ ಉಚ್ಚ ನ್ಯಾಯಾಲಯಗಳ ರಿಜಿಸ್ಟ್ರಾರ್ ಜನರಲ್ ಹಾಗೂ ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ನೋಟಿಸ್ ಜಾರಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News