ಇಂಡಿಗೋದಲ್ಲಿ ಮತ್ತೆ ಇಂಜಿನ್ ದೋಷ: ಐದು ವಿಮಾನಗಳ ಹಾರಾಟ ರದ್ದು

Update: 2018-07-25 18:01 GMT

ಮುಂಬೈ, ಜು.25: ವೈಮಾನಿಕ ಸಂಸ್ಥೆ ಇಂಡಿಗೋದ ವಿಮಾನಗಳಲ್ಲಿ ಅಳವಡಿಸಲಾಗಿರುವ ಪ್ರಾಟ್ ಆ್ಯಂಡ್ ವಿಟ್ನಿ ಇಂಜಿನ್‌ಗಳಲ್ಲಿ ಮತ್ತೆ ದೋಷ ಕಂಡುಬಂದಿದ್ದು, ಬುಧವಾರ ಐದು ಎ320 ನಿಯೊ ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸದ್ಯ ಕೆಲವು ಎ320 ನಿಯೊ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು ಹೊಸ ಪ್ರಾಟ್ ಆ್ಯಂಡ್ ನಿಯೊ ಇಂಜಿನ್‌ಗಳಿಗಾಗಿ ಕಾಯುತ್ತಿದ್ದೇವೆ ಎಂದು ಇಂಡಿಗೋದ ವಕ್ತಾರರು ತಿಳಿಸಿದ್ದಾರೆ. 2016 ಮಾರ್ಚ್‌ನಲ್ಲಿ ಪ್ರಾಟ್ ಆ್ಯಂಡ್ ವಿಟ್ನಿ ಇಂಜಿನ್‌ಗಳನ್ನು ಅಳವಡಿಸಲಾಗಿರುವ ಎ320 ನಿಯೊ ವಿಮಾನಗಳನ್ನು ಖರೀದಿಸಿದ ನಂತರ ಇಂಡಿಗೋ ಅನೇಕ ಬಾರಿ ಇಂಜಿನ್ ಸಮಸ್ಯೆಗಳಿಂದಾಗಿ ವಿಮಾನಗಳ ಹಾರಾಟವನ್ನು ರದ್ದುಗೊಳಿಸಿದೆ. ಹಾರಾಟದ ಮಧ್ಯೆ ಇಂಜಿನ್ ಸ್ಥಗಿತಗೊಳಿಸುವುದರಿಂದ ತೈಲ ಸೋರಿಕೆಯವರೆಗೆ ಈ ಇಂಜಿನ್‌ನಲ್ಲಿ ಹಲವು ದೋಷಗಳು ಎದುರಾಗಿವೆ.

 ಸದ್ಯ ಪ್ರಾಟ್ ಆ್ಯಂಡ್ ವಿಟ್ನಿ ಹೊಸ ಇಂಜಿನ್‌ಗಳನ್ನು ಕಳುಹಿಸಲು ಸಿದ್ಧತೆ ನಡೆಸಿದ್ದು ಈ ಇಂಜಿನ್‌ಗಳನ್ನು ಅಳವಡಿಸಿದ ನಂತರ ರದ್ದುಗೊಂಡ ವಿಮಾನಗಳು ಮತ್ತೆ ಹಾರಾಡಲಿವೆ ಎಂದು ಇಂಡಿಗೊ ವಕ್ತಾರರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News