ನಕಲಿ ಗೋರಕ್ಷಕರ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ವಿಫಲ: ಬಿಜೆಪಿ ಶಾಸಕನಿಂದ ತರಾಟೆ

Update: 2018-07-26 14:55 GMT

ಪಣಜಿ, ಜು. 26: ‘‘ನಕಲಿ ಗೋರಕ್ಷಕರ’’ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಕೇಂದ್ರ ಸರಕಾರ ವಿಫಲವಾಗಿರುವುದಕ್ಕೆ ತನ್ನ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿರುವ ಗೋವಾ ಉಪ ಸ್ಪೀಕರ್ ಮೈಕಲ್ ಲೋಬೊ, ಇದರಿಂದ ಗೋವಾದಲ್ಲಿ ಗೋಮಾಂಸದ ಕೊರತೆ ಉಂಟಾಗಲಿದೆ ಎಂದಿದ್ದಾರೆ. ಗೋಮಾಂಸದ ಕೊರತೆ ಪ್ರವಾಸೋದ್ಯಮದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಪ್ರತಿಪಾದಿಸಿದ ಉತ್ತರ ಗೋವಾ ಜಿಲ್ಲೆಯ ಕಾಲಂಗುಟೆಯ ಬಿಜೆಪಿ ಶಾಸಕ ಮೈಕಲ್ ಲೋಬೋ, ಕಳೆದ ವರ್ಷ ಅಕ್ಟೋಬರ್‌ನಿಂದ ಕಾರ್ಯಚರಿಸದೇ ಇರುವ ಗೋವಾ ಮೀಟ್ ಕಾಂಪ್ಲೆಕ್ಸ್ ಅನ್ನು ತಕ್ಷಣ ಪುನರಾರಂಭಿಸಿ ಎಂದು ಆಗ್ರಹಿಸಿದ್ದಾರೆ. ಸದನದಲ್ಲಿ ಬುಧವಾರ ಅನುಮತಿಗೆ ಆಗ್ರಹಿಸಿದ ಸಂದರ್ಭ ಲೋಬೋ, ಗೋವಾದಲ್ಲಿ ದೊಡ್ಡ ಸಂಖ್ಯೆಯ ಜನರು ಗೋಮಾಂಸ ತಿನ್ನುತ್ತಾರೆ. ಜನರಿಗೆ ಆಹಾರ ವಸ್ತುಗಳನ್ನು ಪೂರೈಸುವುದು ಸರಕಾರದ ಕರ್ತವ್ಯ ಎಂದರು. ಕೆಲವು ನಕಲಿ ಗೋರಕ್ಷಕರು ಗಡಿಯಲ್ಲಿ ನಿಲ್ಲುತ್ತಾರೆ ಹಾಗೂ ರಾಜ್ಯಕ್ಕೆ ಗೋಮಾಂಸದ ಟ್ರಕ್‌ಗಳು ಪ್ರವೇಶಿಸದಂತೆ ತಡೆಯುತ್ತಾರೆ. ಈ ವಿಷಯದಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ. ನಕಲಿ ಗೋರಕ್ಷಕರು ಕರ್ನಾಟಕದಲ್ಲಿ ಕಿರುಕುಳ ನೀಡುತ್ತಿರುವುದರಿಂದ ವ್ಯಾಪಾರಸ್ತರು ಗೋಮಾಂಸ ಸಾಗಾಟ ಮಾಡುವುದನ್ನು ಮಿತಿಗೊಳ ಪಡಿಸಿದ್ದಾರೆ. ಇದರಿಂದ ಇತ್ತೀಚೆಗಿನ ದಿನಗಳಲ್ಲಿ ಗೋವಾ ಗೋಮಾಂಸದ ಕೊರತೆ ಎದುರಿಸುತ್ತಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News