ಕಾಲೇಜು ವಿದ್ಯಾರ್ಥಿನಿ ಹನನ್‍ಳ ವಿರುದ್ಧ ಅಪಪ್ರಚಾರ: ಸೂಕ್ತ ಕ್ರಮಕ್ಕೆ ಸಿಎಂ ಕಚೇರಿ ಸೂಚನೆ
ತಿರುವನಂತಪುರಂ,ಜು.27: ತನ್ನ ವಿದ್ಯಾಭ್ಯಾಸ ಮತ್ತು ಕುಟುಂಬಕ್ಕೆ ಸಹಾಯ ಮಾಡಲು ಕೊಚ್ಚಿಯಲ್ಲಿ ಮೀನು ಮಾರುತ್ತಿದ್ದ ಕಾಲೇಜು ವಿದ್ಯಾರ್ಥಿನಿ ಹನಾನ್‍ರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನಕಾರಿ ಅಪ ಪ್ರಚಾರ ನಡೆಸಿದವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಕಚೇರಿ ಪೊಲೀಸರಿಗೆ ಆದೇಶ ನೀಡಿದೆ. ಹನಾನ್‍ಗೆ ಸೂಕ್ತ ರಕ್ಷಣೆಯನ್ನೂ ನೀಡಬೇಕೆಂದು ಎರ್ನಾಕುಳಂ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ.
ಪ್ರತಿಕೂಲ ಪರಿಸ್ಥಿತಿಯನ್ನು ಮೀರಿ ನಿಂತು ವಿದ್ಯಾಭ್ಯಾಸವನ್ನು ಮುಂದುವರಿಸಲು ಉಪಾಯ ಕಂಡುಕೊಂಡ ಕಾಲೇಜು ಹನಾನ್‍ಳನ್ನು ಕೇರಳ ಆಡಳಿತಾ ಸುಧಾರಣಾ ಆಯೋಗದ ಅಧ್ಯಕ್ಷ ವಿ.ಎಸ್. ಅಚ್ಯುತಾನಂದನ್ ಅಭಿನಂದಿಸಿದ್ದಾರೆ. ಹನಾನ್‍ಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅವಹೇಳನ ನಡೆಸಿದವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಹೇಳಿದರು.
ಜೀವನ ನಡೆಸಲಿಕ್ಕಾಗಿ ಮೀನು ವ್ಯಾಪಾರ ಮಾಡುತ್ತಿರುವ ಹನಾನ್‍ಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಅಪಮಾನಿಸಿದ್ದರು. ಬಾಯಿಗೆಬಂದಂತೆ ಅಪಪ್ರಚಾರ ಮಾಡುವ ಸಾಮಾಜಿಕ ಮಾಧ್ಯಮಗಳ ರೀತಿ ಸರಿಯಲ್ಲ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಖಂಡಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ನಡೆಸಲಾಗಿದೆ. ಅದಕ್ಕೆಲ್ಲ ಹೆದರದೆ ತನ್ನ ಕಾಯಕದಲ್ಲಿ ಮುಂದೆ ಸಾಗಲು ಅನುಕೂಲವಾಗುವಂತೆ ವಿದ್ಯಾರ್ಥಿನಿಗೆ ನೆರವನ್ನೂ ನೀಡಲಾಗುವುದು ಎಂದು ಪಿಣರಾಯಿ ವಿಜಯನ್ ಫೇಸ್‍ಬುಕ್‍ನಲ್ಲಿ ತಿಳಿಸಿದ್ದಾರೆ.