×
Ad

130 ರಾಷ್ಟ್ರಗಳಿಗೆ ವೀಸಾರಹಿತ ಪ್ರಯಾಣಕ್ಕಾಗಿ ಆಂಟಿಗುವಾವನ್ನು ಆಯ್ಕೆ ಮಾಡಿದ್ದೇನೆ: ಚೋಕ್ಸಿ

Update: 2018-07-27 18:15 IST

ಹೊಸದಿಲ್ಲಿ, ಜು.27: 13,500 ಕೋಟಿ ರೂ. ಮೊತ್ತದ ಪಿಎನ್‌ಬಿ ಹಗರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ತಲೆತಪ್ಪಿಸಿಕೊಂಡಿರುವ ಚಿನ್ನಾಭರಣ ಉದ್ಯಮಿ ಮೆಹುಲ್ ಚೋಕ್ಸಿ, ತನ್ನ ಮೇಲಿರುವ ಆರೋಪಗಳೆಲ್ಲಾ ಸುಳ್ಳು, ತಾನು ನಿರ್ದೋಷಿ ಎಂದು ಹೇಳಿಕೊಂಡಿದ್ದಾರೆ.

 ವೆಸ್ಟಿಂಡೀಸ್‌ನ ದಿನಪತ್ರಿಕೆ ‘ಆಂಟಿಗುವಾ ಒಬ್ಸರ್ವರ್’ಗೆ ತನ್ನ ವಕೀಲ ಡೇವಿಡ್ ಡಾರ್ಸೆಟ್ ಮೂಲಕ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ- ಈ ಆರೋಪಗಳಲ್ಲಿ ಸತ್ಯಾಂಶ ಇಲ್ಲ ಎಂದು ಖಚಿತವಾಗಿ ಹೇಳುತ್ತೇನೆ. ಸಂಸ್ಥೆಯ ವ್ಯಾಪಾರ ವಹಿವಾಟನ್ನು ವೃದ್ಧಿಸಲು ವಿದೇಶದಲ್ಲಿ ನೆಲೆಸಿದ್ದೇನೆ ಎಂದು ಚೋಕ್ಸಿ ಹೇಳಿದ್ದಾರೆ. ಮೆಹುಲ್ ಚೋಕ್ಸಿ ವಿರುದ್ಧ ಭಾರತದ ಅಧಿಕಾರಿಗಳು ಹಾಗೂ ಮಾಧ್ಯಮಗಳಲ್ಲಿ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಜುಲೈ 24ರಂದು ಪ್ರತಿಕ್ರಿಯೆ ನೀಡಿದ್ದ ‘ಸಿಟಿಜನ್‌ಶಿಪ್ ಬೈ ಇನ್‌ವೆಸ್ಟ್‌ಮೆಂಟ್ ಯುನಿಟ್(ಸಿಐಯು), 2017ರ ನವೆಂಬರ್‌ನಲ್ಲಿ ಚೋಕ್ಸಿಗೆ ಪೌರತ್ವ ಮಂಜೂರು ಮಾಡಲಾಗಿದೆ ಮತ್ತು ಆತ ಆಂಟಿಗುವಾದಲ್ಲಿ 2018ರ ಜನವರಿ 15ರಂದು ನಿಷ್ಠೆಯ ಪ್ರಮಾಣವಚನ ಸ್ವೀಕರಿಸಿದ್ದಾನೆ ಎಂದು ತಿಳಿಸಿದೆ.

 ಇಂಟರ್‌ಪೋಲ್ ಸೇರಿದಂತೆ ಖ್ಯಾತ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳ ಮೂಲಕ ನಡೆಸಿದ ಪರಿಶೋಧನೆಯ ಬಳಿಕ ಚೋಕ್ಸಿಗೆ ಪೌರತ್ವ ಮಂಜೂರುಗೊಳಿಸಲಾಗಿದೆ. 2017ರಲ್ಲಿ ನಡೆಸಿದ ತನಿಖೆಯ ಸಂದರ್ಭ ಚೋಕ್ಸಿ ಕುರಿತು ಯಾವುದೇ ಅವಹೇಳನಕಾರಿ ಮಾಹಿತಿ ದೊರೆತಿಲ್ಲ ಎಂದು ತಿಳಿಸಿದೆ. ಈ ಮಧ್ಯೆ ಹೇಳಿಕೆ ನೀಡಿರುವ ಮೆಹುಲ್ ಚೋಕ್ಸಿ, ತಲೆತಪ್ಪಿಸಿಕೊಂಡು ವಿದೇಶಕ್ಕೆ ತೆರಳುವ ಅಗತ್ಯ ತನಗಿಲ್ಲ. ವ್ಯಾಪಾರ ವಹಿವಾಟು ವೃದ್ಧಿಗೊಳಿಸುವ ಉದ್ದೇಶದಿಂದ ವೆಸ್ಟಿಂಡೀಸ್‌ನಲ್ಲಿ ನೆಲೆಸಿದ್ದೇನೆ. ಅಲ್ಲದೆ ಇದೇ ಉದ್ದೇಶದಿಂದ 130 ರಾಷ್ಟ್ರಗಳಿಗೆ ವೀಸಾರಹಿತ ಪ್ರಯಾಣಿಸುವ ಸೌಲಭ್ಯ ಪಡೆದುಕೊಂಡಿದ್ದೇನೆ ಎಂದು ತಿಳಿಸಿದ್ದಾನೆ.

2108ರಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲೆಂದು ಅಮೆರಿಕಕ್ಕೆ ತೆರಳಿದ್ದು ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದೇನೆ. ಅಲ್ಲದೆ ‘ಸಿಟಿಜನ್‌ಶಿಪ್ ಬೈ ಇನ್‌ವೆಸ್ಟ್‌ಮೆಂಟ್’ ಯೋಜನೆಯಡಿ ವೆಸ್ಟಿಂಡೀಸ್‌ನ ಅಂಟಿಗ್ವಾ ಮತ್ತು ಬಾರ್ಬಡೋಸ್‌ನ ಪೌರತ್ವವನ್ನು ಕಾನೂನುಬದ್ಧವಾಗಿ ಪಡೆದಿದ್ದೇನೆ. ಪೌರತ್ವಕ್ಕಾಗಿ ತಾನು ಸಲ್ಲಿಸಿದ್ದ ಅರ್ಜಿಯನ್ನು ಕೂಲಂಕಷ ಪರಿಶೋಧನೆಯ ಬಳಿಕವೇ ಮಂಜೂರು ಮಾಡಲಾಗಿದೆ ಎಂದು ತಿಳಿಸಿದ್ದಾನೆ. ಹಲವು ವಾರಗಳ ಹಿಂದೆ ಅಂಟಿಗ್ವಾದ ಪಾಸ್‌ಪೋರ್ಟ್ ಬಳಸಿ ಚೋಕ್ಸಿ ಅಮೆರಿಕದಿಂದ ವೆಸ್ಟಿಂಡೀಸ್‌ಗೆ ತೆರಳಿರುವುದನ್ನು ಸಿಬಿಐ ಖಚಿತಪಡಿಸಿತ್ತು. ಚೋಕ್ಸಿ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿಗೊಳಿಸಬೇಕೆಂದು ಕೋರಿ ಸಿಬಿಐ ಸಲ್ಲಿಸಿರುವ ಮನವಿಯ ಬಗ್ಗೆ ಇಂಟರ್‌ಪೋಲ್ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News