ಪತ್ನಿಯರಿಗೆ ವಂಚಿಸುವ ಎನ್ನಾರೈಗಳಿಗೆ ಕಡಿವಾಣ!

Update: 2018-07-27 15:05 GMT

ಹೊಸದಿಲ್ಲಿ,ಜು.27: ತಮ್ಮ ಪತ್ನಿಯರನ್ನು ತೊರೆಯುವ ಮೂಲಕ ಕಾನೂನು ಕ್ರಮ ಎದುರಿಸುತ್ತಿರುವ ಅನಿವಾಸಿ ಭಾರತೀಯ ಪುರುಷರಿಗೆ ಸಮನ್ಸ್ ಮತ್ತು ವಾರಂಟ್‌ಗಳನ್ನು ಅಪ್‌ಲೋಡ್ ಮಾಡಲು ಜಾಲತಾಣವೊಂದನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಶುಕ್ರವಾರ ಇಲ್ಲಿ ತಿಳಿಸಿದರು. ಆರೋಪಿಯು ತನ್ನ ವಿರುದ್ಧದ ಸಮನ್ಸ್ ಮತ್ತು ವಾರಂಟ್‌ಗೆ ಸ್ಪಂದಿಸದಿದ್ದರೆ ಆತನನ್ನು ತಲೆಮರೆಸಿಕೊಂಡ ಅಪರಾಧಿಯೆಂದು ಘೋಷಿಸಲಾಗುವುದು ಮತ್ತು ಆತನ ಆಸ್ತಿಗಳನ್ನು ಜಪ್ತಿ ಮಾಡಲಾಗುವುದು.

ಈ ಜಾಲತಾಣವನ್ನು ಸಕ್ರಿಯಗೊಳಿಸಲು ಜಾಲತಾಣದಲ್ಲಿ ಅಪ್‌ಲೋಡ್ ಮಾಡಲಾದ ಸಮನ್ಸ್ ಮತ್ತು ವಾರಂಟ್‌ಗಳು ಭಾರತೀಯ ಕಾನೂನಿನಡಿ ಜಾರಿಗೊಂಡಿವೆ ಎಂದು ಜಿಲ್ಲಾಧಿಕಾರಿಗಳು ಪರಿಗಣಿಸಲು ಸಾಧ್ಯವಾಗುವಂತೆ ಅಪರಾಧ ಪ್ರಕ್ರಿಯಾ ಸಂಹಿತೆ(ಸಿಪಿಸಿ)ಗೆ ತಿದ್ದುಪಡಿಗಳನ್ನು ತರುವುದು ಅಗತ್ಯವಾಗುತ್ತದೆ.

ವಿದೇಶಾಂಗ,ಕಾನೂನು,ಗೃಹ ಹಾಗೂ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಗಳು ಜಾಲತಾಣವನ್ನು ಆರಂಭಿಸುವ ಯೋಜನೆಗೆ ಒಪ್ಪಿಗೆ ನೀಡಿವೆ.

 ಸಂಪುಟಕ್ಕೆ ತಿದ್ದುಪಡಿಗಳನ್ನು ಸಲ್ಲಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಮತ್ತು ಮುಂದಿನ ಸಂಸತ್ ಅಧಿವೇಶನದಲ್ಲಿ ಅವುಗಳಿಗೆ ಅಂಗೀಕಾರವನ್ನು ಪಡೆಯಲು ಪ್ರಯತ್ನಿಸುತ್ತೇವೆ ಎಂದು ಎನ್‌ಆರ್‌ಐ ವಿವಾಹಗಳು ಹಾಗೂ ಮಹಿಳೆಯರು ಮತ್ತು ಮಕ್ಕಳ ಕಳ್ಳಸಾಗಣೆಯನ್ನು ತಡೆಯಲು ಮಾರ್ಗೋಪಾಯಗಳ ಬಗ್ಗೆ ಚರ್ಚಿಸಲು ಏರ್ಪಡಿಸಲಾಗಿದ್ದ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಸ್ವರಾಜ್ ತಿಳಿಸಿದರು.

ಎನ್ನಾರೈ ಪುರುಷರು ವಿದೇಶಗಳಲ್ಲಿ ತಮ್ಮ ಪತ್ನಿಯರನ್ನು ತೊರೆಯುತ್ತಿರುವ ಬಗ್ಗೆ ಮತ್ತು ಅವರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆಗಳನ್ನು ನೀಡುತ್ತಿರುವ ಬಗ್ಗೆ ಕಳೆದ ಮೂರು ವರ್ಷಗಳಲ್ಲಿ ತನ್ನ ಸಚಿವಾಲಯಕ್ಕೆ 3,328 ದೂರುಗಳು ಬಂದಿವೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News