ಅಮೆರಿಕದ ಆಮದು ಸುಂಕ ಬೆದರಿಕೆಯ ತೂಗುಗತ್ತಿ: ಪರಸ್ಪರ ಸಹಕಾರ ಬಲಪಡಿಸಲು ‘ಬ್ರಿಕ್ಸ್’ ದೇಶಗಳ ನಿರ್ಧಾರ

Update: 2018-07-27 14:46 GMT

ಜೊಹಾನ್ಸ್‌ಬರ್ಗ್, ಜು. 27: ಬೃಹತ್ ಅಭಿವೃದ್ಧಿಶೀಲ ದೇಶಗಳ ಪೈಕಿ 5 ದೇಶಗಳು ಗುರುವಾರ ಬಹುಪಕ್ಷೀಯ ವ್ಯವಸ್ಥೆಯನ್ನು ಎತ್ತಿಹಿಡಿದಿವೆ ಹಾಗೂ ಅಮೆರಿಕದ ಸುಂಕ ಬೆದರಿಕೆಗಳು ಮತ್ತು ಏಕಪಕ್ಷೀಯ ವ್ಯವಸ್ಥೆಯ ಹಿನ್ನೆಲೆಯಲ್ಲಿ ತಮ್ಮ ನಡುವಿನ ಆರ್ಥಿಕ ಸಹಕಾರವನ್ನು ಬಲಗೊಳಿಸಲು ಮುಂದಾಗಿವೆ.

ಬ್ರೆಝಿಲ್, ರಶ್ಯ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಗಳನ್ನೊಳಗೊಂಡ ‘ಬ್ರಿಕ್ಸ್’ ಗುಂಪಿನ ಮುಖ್ಯಸ್ಥರು ದಕ್ಷಿಣ ಆಫ್ರಿಕದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಸಿದ ಸಮಾವೇಶದಲ್ಲಿ ಈ ಬೆಳವಣಿಗೆ ಸಂಭವಿಸಿದೆ.

 ಈ ಸಮಾವೇಶದ ಹೆಚ್ಚಿನ ಅವಧಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭಿಸಿದ ವ್ಯಾಪಾರ ಸಮರದ ಮೇಲೆ ಗಮನ ಹರಿಸಿತು. ಆದಾಗ್ಯೂ, ಈ ಸಭೆಯಲ್ಲಿ ನಾಯಕರು ಟ್ರಂಪ್ ಹೆಸರನ್ನು ಬಹಿರಂಗವಾಗಿ ಪ್ರಸ್ತಾಪಿಸಿಲ್ಲ.

‘‘ಆರ್ಥಿಕ ಅಭಿವೃದ್ಧಿ ಹೊಂದಿರುವ ಪ್ರಮುಖ ದೇಶಗಳ ಆರ್ಥಿಕ ನೀತಿಗಳ ಪರಿಣಾಮಗಳ ಬಗ್ಗೆ ನಾವು ಕಳವಳಗೊಂಡಿದ್ದೇವೆ’’ ಎಂದು ಅವರು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘‘ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆ ಅಭೂತಪೂರ್ವ ಸವಾಲುಗಳನ್ನು ಎದುರಿಸುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮುಕ್ತ ಜಾಗತಿಕ ಆರ್ಥಿಕತೆಯ ಮಹತ್ವವನ್ನು ನಾವು ಮನಗಂಡಿದ್ದೇವೆ’’ ಎಂದಿದ್ದಾರೆ.

ಟ್ರಂಪ್ ಇತ್ತೀಚಿನ ದಿನಗಳಲ್ಲಿ ಚೀನಾ, ಭಾರತ, ಐರೋಪ್ಯ ಒಕ್ಕೂಟ ಹಾಗೂ ಇತರ ದೇಶಗಳ ಆಮದಿನ ಮೇಲೆ ಹೆಚ್ಚುವರಿ ಸುಂಕ ವಿಧಿಸಿರುವುದು ಬಿಕ್ಕಟ್ಟಿಗೆ ಕಾರಣವಾಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಬ್ರೆಝಿಲ್ ಅಧ್ಯಕ್ಷ ಮೈಕಲ್ ಟೆಮರ್ ಮತ್ತು ದಕ್ಷಿಣ ಆಫ್ರಿಕ ಅಧ್ಯಕ್ಷ ಸಿರಿಲ್ ರಾಮಫೋಸ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News