ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆಗಳನ್ನು ಇಡುತ್ತದೆ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಜು. 27: ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ಪಾಕಿಸ್ತಾನ ಎರಡು ಹೆಜ್ಜೆಗಳನ್ನು ಇಡುತ್ತದೆ ಎಂಬುದಾಗಿ ಪಾಕಿಸ್ತಾನದ ಮುಂದಿನ ಪ್ರಧಾನಿಯಾಗುವರೆಂದು ಭಾವಿಸಲಾಗಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ಗುರುವಾರ ಹೇಳಿದ್ದಾರೆ.
ಸಂಸದೀಯ ಚುನಾವಣೆಯಲ್ಲಿ ತನ್ನನ್ನು ತಾನು ವಿಜಯಿ ಎಂಬುದಾಗಿ ಘೋಷಿಸಿಕೊಂಡ ಬಳಿಕ, ಮಾತನಾಡಿದ ಇಮ್ರಾನ್ ಈ ಮಾತುಗಳನ್ನು ಹೇಳಿದರು.
‘‘ಭಾರತದ ನಾಯಕತ್ವ ಬಯಸಿದರೆ ಅದರೊಂದಿಗಿನ ಸಂಬಂಧವನ್ನು ನಾವು ಸುಧಾರಿಸಲು ಬಯಸುತ್ತೇವೆ. ಪಾಕಿಸ್ತಾನದಲ್ಲಿ ಏನೇ ಸಂಭವಿಸಿದರೆ ಅದಕ್ಕೆ ಭಾರತವನ್ನು ಹೊಣೆಯಾಗಿಸುವುದು ಹಾಗೂ ಭಾರತದಲ್ಲಿ ಏನೇ ಸಂಭವಿಸಿದರೆ ಅದಕ್ಕೆ ಪಾಕಿಸ್ತಾನವನ್ನು ದೂಷಿಸುವುದರಿಂದ ನಾವು ಎಲ್ಲಿ ಇದ್ದೇವೆಯೋ ಅಲ್ಲಿಯೇ ಉಳಿಯುತ್ತೇವೆ’’ ಎಂದು 65 ವರ್ಷದ ಕ್ರಿಕೆಟಿಗ ಹಾಗೂ ರಾಜಕಾರಣಿ ಅಭಿಪ್ರಾಯಪಟ್ಟರು.
ನ್ಯಾಶನಲ್ ಅಸೆಂಬ್ಲಿಯಲ್ಲಿ ಅವರ ಪಕ್ಷವು ಏಕೈಕ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಳಿಕ ಅವರು ಈ ಮಾತುಗಳನ್ನು ಹೇಳಿದ್ದಾರೆ.