×
Ad

ಜೀವಬೆದರಿಕೆ: ಗೋವಾದ ಸಾಹಿತಿ ದಾಮೋದರ್ ಮೌಝೊಗೆ ಪೊಲೀಸ್ ರಕ್ಷಣೆ

Update: 2018-07-27 20:39 IST

ಪಣಜಿ, ಜು.27: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ)ವು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಗೋವಾದ ಸಾಹಿತಿ ದಾಮೋದರ್ ಮೌಝೊಗೆ ಜೀವ ಬೆದರಿಕೆ ಇರುವ ಕುರಿತು ನೀಡಿದ ಮಾಹಿತಿಯ ಹಿನ್ನೆಲೆಯಲ್ಲಿ ಅವರಿಗೆ ಪೊಲೀಸ್ ರಕ್ಷಣೆ ನೀಡಿರುವುದಾಗಿ ಗೋವಾ ಪೊಲೀಸರು ತಿಳಿಸಿದ್ದಾರೆ.

ಆದರೆ ತನಗೆ ಪೊಲೀಸ್ ಭದ್ರತೆಯ ಅಗತ್ಯವಿಲ್ಲ. ವೈಯಕ್ತಿಕವಾಗಿ ತನಗೆ ಯಾವತ್ತೂ ಬೆದರಿಕೆ ಕರೆ ಬಂದಿಲ್ಲ. ಪೊಲೀಸ್ ಇಲಾಖೆ ಹೇಳಿದ ಬಳಿಕವಷ್ಟೇ ತನಗೆ ಈ ವಿಷಯ ತಿಳಿದಿದೆ ಎಂದು ದಾಮೋದರ್ ಮೌಝೊ ಪ್ರತಿಕ್ರಿಯಿಸಿದ್ದಾರೆ. ಕೊಂಕಣಿಯಲ್ಲಿ ಪ್ರಗತಿಪರ ಬರವಣಿಗೆಗೆ ಹೆಸರಾಗಿರುವ ದಾಮೋದರ್ ಅವರ ಕರ್ಮೇಲಿನ್ ಎಂಬ ಕಾದಂಬರಿಗೆ 1983ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ನೀಡಲಾಗಿತ್ತು. ಗೋವಾವು ನೆರೆಯ ಮಹಾರಾಷ್ಟ್ರದೊಂದಿಗೆ ವಿಲೀನವಾಗಬೇಕೇ ಎಂಬ ಬಗ್ಗೆ 1967ರಲ್ಲಿ ನಡೆದಿದ್ದ ಜನಮತ ಸಂಗ್ರಹದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲದೆ ಕೊಂಕಣಿಯನ್ನು ಗೋವಾದ ಅಧಿಕೃತ ಭಾಷೆಯೆಂದು ಮಾನ್ಯಮಾಡಲು ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ದಾಮೋದರ್ ಪಾಲ್ಗೊಂಡಿದ್ದರು. 2010ರಿಂದ ಪ್ರತೀ ವರ್ಷ ನಡೆಯುತ್ತಿರುವ ಗೋವಾ ಕಲೆ ಮತ್ತು ಸಾಹಿತ್ಯ ಉತ್ಸವದ ಸಹಸ್ಥಾಪಕರಾಗಿದ್ದ ದಾಮೋದರ್ ಹಲವು ಕಾದಂಬರಿ ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News