ಚುನಾವಣೆ ‘ಕಳಂಕಪೂರಿತ’, ‘ಸಂದೇಹಾಸ್ಪದ’: ನವಾಝ್ ಶರೀಫ್

Update: 2018-07-27 15:16 GMT

ಇಸ್ಲಾಮಾಬಾದ್, ಜು. 27: ಪಾಕಿಸ್ತಾನದ ಸಂಸತ್ ಮತ್ತು ವಿಧಾನಸಭಾ ಚುನಾವಣೆಗಳಿಗೆ ತನ್ನ ಪ್ರಥಮ ಪ್ರತಿಕ್ರಿಯೆಯನ್ನು ನೀಡಿರುವ ಮಾಜಿ ಪ್ರಧಾನಿ ನವಾಝ್ ಶರೀಫ್, ಮತಗಳನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ ಹಾಗೂ ‘ಕಳಂಕಪೂರಿತ’ ಮತ್ತು ‘ಸಂದೇಹಾಸ್ಪದ’ ಚುನಾವಣಾ ಫಲಿತಾಂಶವು ದೇಶದ ರಾಜಕೀಯದ ಮೇಲೆ ‘ಕೆಟ್ಟ ಪರಿಣಾಮ’ವನ್ನು ಬೀರಲಿದೆ ಎಂದು ಎಚ್ಚರಿಸಿದ್ದಾರೆ.

ಲಾಹೋರ್‌ನ ಅಡಿಯಾಲ ಜೈಲಿನಲ್ಲಿ ತನ್ನನ್ನು ಭೇಟಿಯಾದವರ ಬಳಿ ಅವರು ಈ ಮಾತುಗಳನ್ನು ಆಡಿದ್ದಾರೆ.

ಭ್ರಷ್ಟಾಚಾರ ಮೊಕದ್ದಮೆಗಳಲ್ಲಿ 10 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ಶರೀಫ್‌ರನ್ನು ಅಡಿಯಾಲ ಜೈಲಿನಲ್ಲಿ ಇಡಲಾಗಿದೆ.

ಫೈಸಲಾಬಾದ್, ಲಾಹೋರ್ ಮತ್ತು ರಾವಲ್ಪಿಂಡಿಗಳಲ್ಲಿನ ಚುನಾವಣಾ ಫಲಿತಾಂಶಗಳ ಬಗ್ಗೆ ಪಾಕಿಸ್ತಾನ ಮುಸ್ಲಿಮ್ ಲೀಗ್-ನವಾಝ್ (ಪಿಎಂಎಲ್-ಎನ್) ಪಕ್ಷದ ನಾಯಕರೂ ಆಗಿರುವ ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಈ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಪಕ್ಷದ ಅಭ್ಯರ್ಥಿಗಳು ಉತ್ತಮ ನಿರ್ವಹಣೆಯನ್ನು ನೀಡಿದ್ದರೂ, ಅವರನ್ನು ಸೋತ ಅಭ್ಯರ್ಥಿಗಳೆಂಬುದಾಗಿ ಘೋಷಿಸಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News