ಮಂಗಳೂರು: ಎನ್‌ಎಂಸಿ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರ ಮುಷ್ಕರ, ಡಿಸಿಗೆ ಮನವಿ

Update: 2018-07-28 07:20 GMT

ಮಂಗಳೂರು, ಜು.28: ಕೇಂದ್ರ ಸರಕಾರ ಜಾರಿ ಮಾಡಲು ಉದ್ದೇಶಿಸಿರುವ ನ್ಯಾಷನಲ್ ಮೆಡಿಕಲ್ ಕಮಿಷನ್ (ಎನ್‌ಎಂಸಿ)ಕಾಯ್ದೆಯನ್ನು ವಿರೋಧಿಸಿ ಇಂದು ಖಾಸಗಿ ವೈದ್ಯರು ಒಪಿಡಿ ಬಂದ್ ಮಾಡಿ ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಂಗಳೂರಿನಲ್ಲೂ ಖಾಸಗಿ ವೈದ್ಯರು ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಅದಾಗ್ಯೂ, ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳಲ್ಲಿ ಬೆಳಗ್ಗೆ ಒಪಿಡಿಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಯಿತು. ನಗರದ ಫಾದರ್ ಮುಲ್ಲರ್ ಆಸ್ಪತ್ರೆ, ಕೆಎಂಸಿ, ಎ.ಜೆ. ಮೊದಲಾದ ಆಸ್ಪತ್ರೆಗಳಲ್ಲಿ ಬೆಳಗ್ಗೆ ಸುಮಾರು 10 ಗಂಟೆಯವರೆಗೂ ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆಯನ್ನು ಒದಗಿಸುವ ಮೂಲಕ ಆಸ್ಪತ್ರೆಗಳಿಗೆ ದೂರದಿಂದ ಬಂದಂತಹ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಕ್ರಮ ವಹಿಸಲಾಗಿತ್ತು. ಜತೆಗೆ ತುರ್ತು ಸೇವೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಆಸ್ಪತ್ರೆಗಳಲ್ಲಿ ಎಚ್ಚರಿಕೆ ವಹಿಸಲಾಗಿದೆ.

ಈ ನಡುವೆ, ಭಾರತೀಯ ವೈದ್ಯಕೀಯ ಸಂಘದ ಮಂಗಳೂರು ಘಟಕದ ವತಿಯಿಂದ ಐಎಂಎ ಸಭಾಂಗಣದಲ್ಲಿ ಖಾಸಗಿ ವೈದ್ಯರು ಕೇಂದ್ರ ಸರಕಾರದ ಎನ್‌ಎಂಸಿ ಕಾಯ್ದೆಯನ್ನು ವಿರೋಧಿಸಿ ಸಾಂಕೇತಿಕ ಪ್ರತಿಭಟನೆ ನಡೆಸಿ ಬಳಿಕ ಜಿಲ್ಲಾಧಿಕಾರಿ ಕಚೇರಿ ಮೂಲಕ ಪ್ರಧಾನ ಮಂತ್ರಿಗೆ ಮನವಿ ಸಲ್ಲಿಸಿದರು.

ಕೇಂದ್ರ ಸರಕಾರವು ರಾಷ್ಟ್ರೀಯ ವೈದ್ಯಕೀಯ ಆಯೋಗದ ಶಿಫಾರಸಿನ ಮೇರೆಗೆ ಜಾರಿಗೆ ತರಲು ಉದ್ದೇಶಿಸಿರುವ ಮಸೂದೆ ಅಸಂವಿಧಾನಿಕ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ. ಸಾರ್ವಜನಿಕ ಹಿತಾಸಕ್ತಿ ಹಾಗೂ ಭಾರತದ ವೈದ್ಯಕೀಯ ಕ್ಷೇತ್ರದ ಅಭಿವೃದ್ಧ್ದಿಗೆ ಮಸೂದೆ ಮಾರಕವಾಗಿರುವುದಾಗಿ ಮನವಿಯಲ್ಲಿ ಉಲ್ಲೇಖಿಸಿರುವ ಸಂಘವು, ಮಸೂದೆಯಲ್ಲಿ ರಾಜ್ಯಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಆಕ್ಷೇಪಿಸಿದೆ.

2017ರಲ್ಲಿ ಮಂಡಿಸಲಾದ ಕಾನೂನಿನ ಋಣಾತ್ಮಕ ಅಂಶಗಳನ್ನು ಪರಿಗಣಿಸಲು ಲೋಕಸಭೆಯ ಸ್ಥಾಯಿ ಕಮಿಟಿಗೆ ಸೂಚಿಸಲಾಗಿತ್ತು. ಈ ಕಮಿಟಿಯು ಹಲವಾರು ಸಾಕ್ಷಿಗಳು ಮತ್ತು ಪರಿಣಿತರನ್ನು ವಿಚಾರಿಸಿ 24 ಸಲಹೆಗಳನ್ನು ಸೂಚಿಸಿತ್ತು. ಇವುಗಳಲ್ಲಿ ಕೇವಲ ಒಂದನ್ನು ಮಾತ್ರ ಸಂಪೂರ್ಣವಾಗಿ ಹಾಗೂ ಮೂರನ್ನು ಭಾಗಶಃ ಅಳವಡಿಸಿ ಉಳಿದ ಅಂಶಗಳನ್ನು ಕೈಬಿಟ್ಟು ಲೋಕಸಭೆಯಲ್ಲಿ ಮತ್ತೆ ಮಂಡಿಸಲಾಗಿದೆ. 29 ಸದಸ್ಯರ ಪೈಕಿ 9 ಮಂದಿ ಚುನಾಯಿತ ಸದಸ್ಯರು ಇರಬೇಕೆಂಬ ಕಮಿಟಿಯ ಸಲಹೆಯನ್ನು ಪರಿಗಣಿಸಿಲ್ಲ. ಎನ್‌ಎಂಸಿ ಸ್ವಾಯತ್ತ ಬೋರ್ಡ್‌ಗಳಲ್ಲಿ ಚುನಾಯಿತ ಸದಸ್ಯರಿರಬೇಕು ಎಂಬ ಸಲಹೆಯನ್ನು ಪರಿಗಣಿಸಲಾಗಿಲ್ಲ. ರಾಜ್ಯದ ವೈದ್ಯಕೀಯ ಮಂಡಳಿಗಳಿಗೆ ಸ್ವಾಯತ್ತೆಯನ್ನು ನೀಡಲಾಗಿಲ್ಲ ಸೇರಿದಂತೆ ಹಲವಾರು ಅಂಶಗಳನ್ನು ಸಂಘವು ಮನವಿಯಲ್ಲಿ ಉಲ್ಲೇಖಿಸಿದೆ. ಈ ಅಂಶಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಮನವಿಯಲ್ಲಿ ಒತ್ತಾಯಿಸಲಾಗಿದೆ.

ಐಎಂಎಯ ಮಂಗಳೂರು ಘಟಕದ ಅಧ್ಯಕ್ಷ ಡಾ.ಕೆ.ರಾಮಚಂದ್ರ ಕಾಮತ್ ನೇತೃತ್ವದ ವೈದ್ಯರ ನಿಯೋಗವು ಜಿಲ್ಲಾಧಿಕಾರಿ ಪ್ರತಿನಿಧಿಗೆ ಮನವಿಯನ್ನು ಸಲ್ಲಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News