ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸಲಿದ್ದಾರೆ ಕಪಿಲ್‌ದೇವ್!

Update: 2018-07-29 17:01 GMT

ಹೊಸದಿಲ್ಲಿ, ಜು.29: ಸುಮಾರು 35 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡ ಚೊಚ್ಚಲ ವಿಶ್ವಕಪ್ ಜಯಿಸಲು ತಂಡದ ನಾಯಕತ್ವವಹಿಸಿಕೊಂಡಿದ್ದ ಕ್ರೀಡಾಪಟು ಕ್ರಿಕೆಟ್‌ನಿಂದ ನಿವೃತ್ತಿಯಾಗಿ 24 ವರ್ಷ ಕಳೆದ ಬಳಿಕ ಈಗ ಭಾರತವನ್ನು ಮತ್ತೊಮ್ಮೆ ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಈ ಸಾಧನೆ ಮಾಡಲು ಸಜ್ಜಾಗಿರುವವರು ಮಾಜಿ ಕ್ರಿಕೆಟ್ ನಾಯಕ ಕಪಿಲ್‌ದೇವ್. ಅವರು ಈ ಬಾರಿ ಗಾಲ್ಫ್ ಕೋರ್ಸ್‌ನಲ್ಲಿ ತನ್ನ ಕೌಶಲ್ಯ ಪ್ರದರ್ಶಿಸಲಿದ್ದಾರೆ.

59ರ ಹರೆಯದ ಮಾಜಿ ಆಲ್‌ರೌಂಡರ್ ಕಪಿಲ್‌ದೇವ್ ಅಕ್ಟೋಬರ್‌ನಲ್ಲಿ ಜಪಾನ್‌ನಲ್ಲಿ ನಡೆಯುವ ಏಶ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ತಿಂಗಳಾರಂಭದಲ್ಲಿ ನೊಯ್ಡಾದ ಜೆಪಿ ಗ್ರೀನ್ಸ್ ಗಾಲ್ಫ್ ಕೋರ್ಸ್‌ನಲ್ಲಿ ನಡೆದ ಅಖಿಲ ಭಾರತ ಸೀನಿಯರ್ ಟೂರ್ನಿಯಲ್ಲಿ ನೀಡಿದ ಪ್ರದರ್ಶನ ಆಧರಿಸಿ ಕಪಿಲ್ ದೇವ್ ಜಪಾನ್ ಟೂರ್ನಿಗೆ ಆಯ್ಕೆಯಾಗಿದ್ದಾರೆ.

ಟೂರ್ನಿಯು ಅ.17 ರಿಂದ 19ರ ತನಕ ಜಪಾನ್‌ನ ಮಿಯಾಝಕಿಯ ಟಾಮ್ ವಾಟ್ಸನ್ ಗಾಲ್ಫ್ ಕ್ಲಬ್‌ನಲ್ಲಿ ನಡೆಯುವುದು. 55 ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಪುರುಷ ಗಾಲ್ಫ್ ಆಟಗಾರರು ಏಶ್ಯಾ ಪೆಸಿಫಿಕ್ ಸೀನಿಯರ್ಸ್ ಟೂರ್ನಿಯಲ್ಲಿ ಸ್ಪರ್ಧಿಸಬಹುದು.

ಕಪಿಲ್ ಭಾರತದ ಪರ 131 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಗಳನ್ನು ಕಬಳಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 225 ಪಂದ್ಯಗಳಲ್ಲಿ 253 ವಿಕೆಟ್‌ಗಳನ್ನು ಉರುಳಿಸಿದ್ದಾರೆ. 1983ರ ಜೂನ್‌ನಲ್ಲಿ ನಡೆದ ವಿಶ್ವಕಪ್‌ನ ಫೈನಲ್‌ನಲ್ಲಿ ಕ್ಲೈವ್‌ ಲಾಯ್ಡಾ ನೇತೃತ್ವದ ವೆಸ್ಟ್‌ಇಂಡೀಸ್ ತಂಡವನ್ನು 43 ರನ್‌ಗಳಿಂದ ಸೋಲಿಸಿ ಭಾರತ ಚೊಚ್ಚಲ ವಿಶ್ವಕಪ್ ಜಯಿಸಲು ನೆರವಾಗಿದ್ದರು. ಇದು ಅವರ ವೃತ್ತಿಜೀವನದ ಸ್ಮರಣೀಯ ಕ್ಷಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News