ಮೊಸಳೆಗೆ ಕಣ್ಣೀರಿನ ವಿದಾಯ ಹೇಳಿದ ಕುಟುಂಬ!
ವಿಲಕ್ಷಣವೆನ್ನಿಸುವಂತಹ ಸ್ನೇಹದ ಹಲವಾರು ಕಥೆಗಳನ್ನು ನಾವು ಕೇಳಿದ್ದೇವೆ. ಆದರೆ ಅವುಗಳ ಪೈಕಿ ಕೆಲವು ತೀರ ವಿಭಿನ್ನತೆಯ ಅನುಭವವನ್ನು ನೀಡುತ್ತವೆ.
ಮನೆಗಳಲ್ಲಿ ನಾಯಿ,ಬೆಕ್ಕು ಮತ್ತು ಅಂದದ ಪಕ್ಷಿಗಳನ್ನು ಸಾಕುವುದು ಸಾಮಾನ್ಯ. ಕೆಲವರು ಹುಲಿ,ಸಿಂಹ....ಅಷ್ಟೇ ಏಕೆ, ಮೊಸಳೆಗಳನ್ನೂ ಸಾಕುತ್ತಾರೆ. ಇಲ್ಲಿದ್ದಾನೆ ಮೊಸಳೆಯನ್ನು ಸಾಕಿರುವ ಭೂಪ. ಅದು ಮರಿಯಾಗಿದ್ದಾಗ ಕೊಲ್ಲಲ್ಪಡುವುದನ್ನು ತಪ್ಪಿಸಲು ಅದನ್ನು ಮನೆಗೆ ತಂದು ಸಾಕಿದ್ದ. ಅದು ಆತನ ಕುಟುಂಬದ ಒಂದು ಭಾಗವೇ ಆಗಿಬಿಟ್ಟಿತ್ತು. ಕಳೆದ 20 ವರ್ಷಗಳಿಂದಲೂ ಮೊಸಳೆ ಈತನ ಮುದ್ದಿನ ಸಾಕುಪ್ರಾಣಿಯಾಗಿತ್ತು.
ಇಂಡೋನೇಷ್ಯಾದ ಇರ್ವಾನ್ ಎಂಬಾತನ ಮನೆಯ ಹಿಂಭಾಗದಲ್ಲಿರುವ ಪುಟ್ಟ ಕೊಳವೊಂದರಲ್ಲಿ ಈ ಮೊಸಳೆಯಿದ್ದು, ಮನೆಮಂದಿಯೆಲ್ಲ ಅದನ್ನು ಮುದ್ದಿನಿಂದ ಕೊಜೆಕ್ ಎಂದು ಕರೆಯುತ್ತಿದ್ದರು. ಕೊಳಕ್ಕೆ ಹೊಂದಿಕೊಂಡೇ ಟೆಲ್‌ಗಳನ್ನು ಅಳವಡಿಸಿರುವ ಪುಟ್ಟ ವರಾಂಡಾ ಇದೆ ಮತ್ತು ಅಲ್ಲಿ ಇರ್ವಾನ್‌ನ ಮೂವರು ಪುಟ್ಟ ಮಕ್ಕಳು ಮೊಸಳೆಯ ಭಯವಿಲ್ಲದೇ ಚೆಂಡಾಟವನ್ನು ಆಡುತ್ತಿದ್ದರು.
ಇರ್ವಾನ್‌ನ ಮುದ್ದಿನ ಮೊಸಳೆ ನೆರೆಕರೆಯವರಿಗೆಂದೂ ಅಪಾಯವಾಗಿ ಕಂಡು ಬಂದಿರಲಿಲ್ಲ. 20 ವರ್ಷಗಳ ಹಿಂದೆ ಮರಿಯಾಗಿದ್ದ ಕೊಜೆಕ್‌ನನ್ನು ಇರ್ವಾನ್ ಮನೆಗೆ ತಂದಿದ್ದಾಗ ಅದು ಆತನನ್ನು ಕಚ್ಚಿತ್ತು. ಅದೇ ಕೊನೆ,ಅಲ್ಲಿಂದೀಚೆಗೆ 20 ವರ್ಷಗಳಲ್ಲಿ ಅದು ಇರ್ವಾನ್‌ಗಾಗಲೀ,ಆತನ ಕುಟುಂಬದವರಿಗಾಗಲೀ ಅಥವಾ ತನ್ನನ್ನು ನೋಡಲು ಬರುತ್ತಿದ್ದ ಜನರಿಗಾಗಲೀ ಪುಟ್ಟಗಾಯವನ್ನೂ ಮಾಡಿಲ್ಲ.
ಪಶ್ಚಿಮ ಜಾವಾ ಪ್ರಾಂತ್ಯದ ಬೊಗೊರ್ ನಿವಾಸಿಯಾಗಿರುವ ಇರ್ವಾನ್ 20 ವರ್ಷಗಳ ಹಿಂದೆ ಸಿಯಾಂಜರ್‌ಗೆ ತೆರಳಿದ್ದಾಗ ಕೆಲವು ಮೀನುಗಾರ ಮಕ್ಕಳು ಮೊಸಳೆ ಮರಿಯೊಂದಕ್ಕೆ ತೊಂದರೆ ಕೊಡುತ್ತಿದ್ದುದನ್ನು ಕಂಡಿದ್ದ. ಅದು ಅವರ ಪಾಲಿಗೆ ಮೋಜಿನ ಆಟವಾಗಿತ್ತು. 10 ಸೆಂ.ಮೀ.ಉದ್ದವಿದ್ದ ಅದು ಹಲ್ಲಿ ಎಂದೇ ಅವರು ಭಾವಿಸಿದ್ದರು. "ಅದನ್ನೇನು ಮಾಡುತ್ತೀರಾ" ಎಂದು ಇರ್ವಾನ್ ಪ್ರಶ್ನಿಸಿದಾಗ "ಕೊಲ್ಲುತ್ತೇವೆ" ಎಂದು ಅವರು ಉತ್ತರಿಸಿದರು. ಮೊಸಳೆ ಮರಿಯ ಬಗ್ಗೆ ಮರುಕ ಪಟ್ಟುಕೊಂಡ ಇರ್ವಾನ ಆ ಹುಡುಗರಿಗೆ ಸ್ವಲ್ಪ ಹಣವನ್ನು ನೀಡಿ ಅದನ್ನು ತನ್ನೊಂದಿಗೆ ಮನೆಗೆ ತಂದಿದ್ದ.
ಇರ್ವಾನ್‌ನ ನೆರೆಕರೆಯವರು ಮತ್ತು ಸ್ನೇಹಿತರು ಕೊಜೆಕ್‌ನನ್ನು ನಾಯಿ,ಬೆಕ್ಕುಗಳಂತೆ ಸಾಕುಪ್ರಾಣಿ ಎಂದೇ ಪರಿಗಣಿಸಿದ್ದರು. ಬರೋಬ್ಬರಿ ಆರಡಿ ಉದ್ದ ಬೆಳೆದಿರುವ ಕೊಜೆಕ್200 ಕೆ.ಜಿ.ತೂಕ ಹೊಂದಿದ್ದು,ಪರಿಸರದಲ್ಲಿ ‘ಫ್ಯಾಟ್ ಕ್ರೊಕೊಡೈಲ್’ಎಂದೇ ಖ್ಯಾತಿ ಪಡೆದಿತ್ತು.
ಬರೋಬ್ಬರಿ ಎರಡು ಕೆ.ಜಿ.ಮೀನನ್ನು ಕೊಜೆಕ್‌ಗೆ ತಿನ್ನಿಸುತ್ತಿದ್ದ ಇರ್ವಾನ್ ವಾರಕ್ಕೊಮ್ಮೆ ಅದಕ್ಕೆ ಸ್ನಾನವನ್ನು ಮಾಡಿಸುತ್ತಿದ್ದ. ಬ್ರಷ್‌ನಿಂದ ಮೈ ಮತ್ತು ಹಲ್ಲುಗಳನ್ನೂ ಉಜ್ಜುತ್ತಿದ್ದ.
ಕಣ್ಣೀರಿನ ವಿದಾಯ
ಆದರೆ ಈ ವರ್ಷ ಈ ಸಾಕುಮೊಸಳೆಯ ವಿಷಯ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣಾ ಸಂಸ್ಥೆಯ ಕಿವಿಗೆ ಬಿದ್ದಿತ್ತು. ಇಂಡೋನೇಷ್ಯಾದ ಕಾನೂನಿನಂತೆ ಮೊಸಳೆ ರಕ್ಷಿತ ಪ್ರಾಣಿಯಾಗಿದ್ದು,ಅದನ್ನು ಸಾಕುಪ್ರಾಣಿಯಾಗಿ ಇಟ್ಟುಕೊಳ್ಳುವಂತಿಲ್ಲ. ಕೊಜೆಕ್‌ನನ್ನು ಒಯ್ಯಲು ಅಧಿಕಾರಿಗಳು ಬಂದಿದ್ದಾಗ ಇರ್ವಾನ್‌ನ ತಾಯಿ ಬಿಕ್ಕಿ ಬಿಕ್ಕಿ ಅತ್ತಿದ್ದಳು. ಕೊಜೆಕ್ ತನ್ನ ಮೊಮ್ಮಗನಿದ್ದಂತೆ ಎಂದು ಅಳುವಿನ ನಡುವೆಯೇ ಆಕೆ ಹೇಳುತ್ತಿದ್ದರೆ ಇರ್ವಾನ್ ಹೃದಯವನ್ನು ಕಲ್ಲಾಗಿಸಿಕೊಂಡಿದ್ದ. ಆತನ ಕುಟುಂಬದ ಇತರ ಸದಸ್ಯರ ಕಣ್ಣಾಲಿಗಳೂ ತುಂಬಿಬಂದಿದ್ದವು.
20 ವರ್ಷಗಳಿಂದ ತನ್ನನ್ನು ಸಲಹಿದ್ದ ಕುಟುಂಬವನ್ನು ತೊರೆಯಲು ಕೊಜೆಕ್‌ಗೂ ಇಷ್ಟವಿರಲಿಲ್ಲ. ಅದನ್ನು ಬೋನಿನಲ್ಲಿ ಸೇರಿಸಲು ಅಧಿಕಾರಿಗಳು ಹರಸಾಹಸ ಪಡುವಂತಾಗಿತ್ತು.
ಕೊಜೆಕ್‌ನನ್ನು ಈಗ ಬೊಗೊರ್‌ನ ತಮನ್ ಸಫಾರಿ ಸಂರಕ್ಷಣಾ ಉದ್ಯಾನದಲ್ಲಿಡಲಾಗಿದೆ.
ನನಗೆ ತುಂಬ ದುಃಖವಾಗುತ್ತಿದೆ. ಆದರೆ ಕಾನೂನನ್ನು ನಾನು ಗೌರವಿಸುತ್ತೇನೆ. ಕೊಜೆಕ್ ಅಲ್ಲಿ ಸುಖವಾಗಿರುತ್ತಾನೆ ಎಂದು ನಂಬಿದ್ದೇನೆ. ಆತ ಸಾಕು ಮೊಸಳೆಯಾಗಿರುವುದರಿಂದ ದಯವಿಟ್ಟು ಅದನ್ನು ಇತರ ಮೊಸಳೆಗಳೊಂದಿಗೆ ಸೇರಿಸಬೇಡಿ ಎಂದು ಇರ್ವಾನ್ ಅಧಿಕಾರಿಗಳಲ್ಲಿ ಬೇಡಿಕೊಂಡಿದ್ದ.
ಹೀಗಾಗಿ ಕೊಜೆಕ್‌ನನ್ನು ಉದ್ಯಾನದಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಬೊಜ್ಜು ಹೆಚ್ಚಿರುವುದರಿಂದ ಅದನ್ನು ಇಳಿಸಲು ವೈದ್ಯರು ಅದರ ಆಹಾರ ಕ್ರಮವನ್ನು ಬದಲಿಸಿದ್ದಾರೆ. ಇರ್ವಾನ್ ಮತ್ತು ಆತನ ಕುಟುಂಬ ಸದಸ್ಯರು ಆಗಾಗ್ಗೆ ಉದ್ಯಾನಕ್ಕೆ ತೆರಳಿ ತಮ್ಮ ಪ್ರೀತಿಯ ಕೊಜೆಕ್ ಜೊತೆ ಕೆಲ ಕಾಲ ಕಳೆಯುತ್ತಾರೆ.
ಕೊಜೆಕ್ ಇರ್ವಾನ್ ಮನೆಯಲ್ಲಿದ್ದಾಗಿನ ಮತ್ತು ಆತನಿಗೆ ವಿದಾಯ ಹೇಳುವ ಸಂದರ್ಭದ ಎರಡು ವೀಡಿಯೊಗಳಿಲ್ಲಿವೆ ನೋಡಿ......