ಆ.1ರಂದು ರಸ್ತೆ ಕಾಮಗಾರಿ ವಿಳಂಬ ವಿರೋಧಿಸಿ ಪ್ರತಿಭಟನೆ: ಜೆ.ಆರ್. ಲೋಬೊ

Update: 2018-07-30 11:08 GMT

ಮಂಗಳೂರು, ಜು. 30: ಪಂಪ್‌ವೆಲ್‌ನ ಮೇಲ್‌ಸೇತುವೆ ರಸ್ತೆ ಕಾಮಗಾರಿ ಕಳೆದ ಎಂಟು ವರ್ಷದಿಂದ ಆಮೆ ಗತಿಯಲ್ಲಿ ಸಾಗುತ್ತಿರುವುದನ್ನು ವಿರೋಧಿಸಿ ಆ. 1ರಂದು ಮಂಗಳೂರು ಉತ್ತರ ಹಾಗೂ ದಕ್ಷಿಣ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ದೇಶದ ವಿವಿಧ ಕಡೆಗಳಲ್ಲಿ ಪ್ಲೈ ಓವರ್ ಕಾಮಗಾರಿಗಳು ಕೇವಲ ಒಂದೂವರೆ ವರ್ಷದೊಳಗೆ ಮುಕ್ತಾಯವಾಗುತ್ತದೆ. ಆದರೆ ಪಂಪ್‌ವೆಲ್‌ನ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಕಾಮಗಾರಿ ಎಂಟು ವರ್ಷ ಆದರೂ ಆಮೆ ಗತಿಯಲ್ಲಿ ಸಾಗುತ್ತಿದೆ ಇನ್ನೂ ಪೂರ್ಣಗೊಂಡಿಲ್ಲ. ಕೇಂದ್ರ ಸರಕಾರ ಹಾಗೂ ಕೇಂದ್ರ ಸರಕಾರವನ್ನು ಪ್ರತಿನಿಧಿಸುತ್ತಿರುವ ಈ ಕ್ಷೇತ್ರದ ಸಂಸದರು ಇದಕ್ಕೆ ನೇರ ಹೊಣೆಗಾರರಾಗಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ರೀತಿ ಕಾಮಗಾರಿ ವಿಳಂಬವಾಗಿರುವುದಕ್ಕೆ ರಾಜ್ಯ ಸರಕಾರ ವಾಗಲಿ ಸ್ಥಳೀಯ ಮಹಾನಗರ ಪಾಲಿಕೆಯಾಗಲಿ ಕಾರಣವಲ್ಲ ಕೇಂದ್ರ ಸರಕಾರವನ್ನು ಪ್ರತಿನಿಧಿಸುವ ಜನಪ್ರತಿನಿಧಿ ಕಾರಣರಾಗುತ್ತಾರೆ ಎಂದು ಜೆ.ಆರ್.ಲೋಬೊ ತಿಳಿಸಿದ್ದಾರೆ.

ಶಿರಾಡಿ ಘಾಟಿಯ ಕಾಂಕ್ರೀಟ್ ರಸ್ತೆ ಕಾಮಗಾರಿ ಆಸ್ಕರ್ ಫೆರ್ನಾಂಡೀಸ್ ಸಂಸದರಾಗಿದ್ದಾಗ ಚಾಲನೆ ಗೊಂಡು ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಆದರೆ ಕಳೆದ ಎಂಟು ವರ್ಷಗಳಲ್ಲಿ ಪಂಪ್‌ವೆಲ್,ತೊಕ್ಕೊಟ್ಟು ಮೇಲ್ ಸೇತುವೆ ರಸ್ತೆ ಕಾಮಗಾರಿ ಆಮೆ ಗತಿಯಲ್ಲಿ ಸಾಗುತ್ತಿದೆ. ನಂತೂರು ವೃತ್ತದ ಬಳಿಯಿಂದ ಕೆ.ಪಿ.ಟಿವರೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆದಿಲ್ಲ. ಮಂಗಳೂರು ಉಡುಪಿ ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಯ ಸುರತ್ಕಲ್ ಸೇರಿದಂತೆ ಹಲವು ಕಡೆ ಬೃಹತ್ ಗಾತ್ರದ ರಸ್ತೆ ಹೊಂಡಗಳು ನಿರ್ಮಾಣ ಗೊಂಡಿವೆ. ಅವುಗಳನ್ನು ನಿರ್ವಹಣೆ ಮಾಡುವಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಂಪೂರ್ಣ ವಿಫಲಗೊಂಡಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನಿರ್ಮಾಣಗೊಂಡ ಮೇಲ್‌ಸೇತುವೆ ರಸ್ತೆ ಕಾಮಗಾರಿಯ ಪಕ್ಕ ಬಿಕರ್ಣಕಟ್ಟೆಯ ಬಳಿ ನಿರ್ಮಾಣಗೊಂಡ ಕಾರ್ಕಳ -ಮೂಡಬಿದ್ರೆಯನ್ನು ಸಂಪರ್ಕಿಸುವ ಪ್ರಮುಖ ಹೆದ್ದಾರಿ ರಸ್ತೆ ಅತ್ಯಂತ ಕಿರಿದಾದ ಗಲ್ಲಿಯಲ್ಲಿ ಸಾಗುವ ರಸ್ತೆಯಂತಾಗಿದೆ. ಈ ಬಗ್ಗೆ ಸಂಸದರು ಮೌನವಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಹಾಗೂ ಅದಕ್ಕೆ ಸಂಬಂಧಿಸಿದಂತೆ ಕಾಮಗಾರಿ ವಿಳಂಬವಾಗುತ್ತಿರುವ ಬಗ್ಗೆ ಶಾಸಕನಾಗಿರುವ ಸಂದರ್ಭದಲ್ಲಿ ಹಲವು ಬಾರಿ ಮನವಿ ಮಾಡಿದರೂ ಕೇಂದ್ರ ಸರಕಾರದಿಂದ ಸೂಕ್ತ ಸ್ಪಂದನ ದೊರೆತಿಲ್ಲ. ಸಂಸದರು ಏಳು ವರ್ಷದ ಬಳಿಕ ಕೇಂದ್ರದ ಸಚಿವರಿಗೆ ಮನವಿ ಮಾಡಿದ್ದಾರೆ. ಇಷ್ಟರ ವರೆಗೆ ಏಕೆ ಮನವಿ ಮಾಡಿಲ್ಲ ಎನ್ನುವುದನ್ನು ಜನರಿಗೆ ತಿಳಿಸಬೇಕಾಗಿದೆ ಎಂದು ಮಾಜಿ ಶಾಸಕ ಜೆ.ಆರ್.ಲೋಬೊ ತಿಳಿಸಿದ್ದಾರೆ.

ಆಧಾರ ರಹಿತ ಆರೋಪ:- ಪಂಪ್‌ವೆಲ್ ಮೇಲ್ ಸೇತುವೆ ಕಾಮಗಾರಿ ವಿಳಂಬವಾಗಲು ಹಲವು ಕುಂಟು ನೆಪಗಳನ್ನು ಹೇಳುವವರು ನನ್ನ ವಿರುದ್ಧ ಆಧಾರ ರಹಿತವಾಗಿ ಆರೋಪ ಮಾಡುತ್ತಿದ್ದಾರೆ. ನಾನು ಶಾಸಕನಾಗಿದ್ದಾಗ ಯೋಜನೆಯ ನಕ್ಷೆಯನ್ನಾಗಲಿ ಬದಲಾಯಿಸಲು ಹೇಳಿಲ್ಲ. ಕಾಮಗಾರಿಯಲ್ಲಿ ಹಸ್ತಕ್ಷೇಪ ವನ್ನು ಮಾಡಿಲ್ಲ. ಸಂಸದರು ಮಾಹಿತಿಯ ಕೊರತೆಯಿಂದ ನನ್ನ ಮೇಲೆ ಆರೋಪ ಮಾಡಿದ್ದಾರೆ. ಗುತ್ತಿಗೆ ವಹಿಸಿಕೊಟ್ಟ ಗುತ್ತಿಗೆ ದಾರರು ಕಾರ್ಯನಿರ್ವಹಿಸದೆ ಇದ್ದರೆ ಅವರ ವಿರುದ್ಧ ಕ್ರಮ ಕಯಗೊಳ್ಳಬೇಕಾಗಿತ್ತು .ಅಥವಾ ಅಂತಹ ಗುತ್ತಿಗೆದಾರರನ್ನು ಕಪ್ಪು ಪಟ್ಟಿಯಲ್ಲಿ ಸೇರಿಸಬೇಕಾಗಿತ್ತು. ರಾಷ್ಟೀಯ ಹೆದ್ದಾರಿಯ ಅಧಿಕಾರಿಗಳು ಗುತ್ತಿಗೆದಾರರ ಹಾಗೂ ಕಾಮಗಾರಿಯನ್ನು ನಿರ್ವಹಿಸಬೇಕಾದ ಕೇಂದ್ರ ಸರಕಾರದ ಬೇಜವಾಬ್ದಾರಿಯಿಂದ ಜನಸಾಮಾನ್ಯರು ತೊಂದರೆಗೀಡಾಗಿದ್ದಾರೆ. ಈ ಬಗ್ಗೆ ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿದರೂ ಜನರ ಕೆಲಸ ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಜನರ ಬಳಿಗೆ ಹೋಗುವುದು ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ಜೆ.ಆರ್.ಲೋಬೊ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ಸಲಿಂ, ಕಾಂಗ್ರೆಸ್ ಮುಖಂಡರಾದ ಕಳ್ಳಿಗೆ ತಾರಾನಾಥ ಶೆಟ್ಟಿ, ಟಿ.ಕಿ ಸುಧೀರ್, ಮರಿಯಮ್ಮ ಥೋಮಸ್, ಸಂತೋಷ್ ಶೆಟ್ಟಿ, ವಿಶ್ವಾಸ್‌ದಾಸ್, ರಮಾನಂದ ಪೂಜಾರಿ, ಹೊನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News