ಸುರತ್ಕಲ್ ಟೋಲ್ ಗುತ್ತಿಗೆ ನವೀಕರಣದಲ್ಲಿ ಸಂಸದ ನಳಿನ್ ಕಟೀಲ್ ಬಣ್ಣ ಬಯಲು: ಮುನೀರ್ ಕಾಟಿಪಳ್ಳ

Update: 2018-07-30 10:35 GMT

ಮಂಗಳೂರು, ಜು. 30: ಸುರತ್ಕಲ್ ನಲ್ಲಿರುವ ನಿಯಮ ಬಾಹಿರ ಟೋಲ್ ಗೇಟ್ "ಗುತ್ತಿಗೆ ಅವಧಿ ಮುಕ್ತಾಯಗೊಂಡ ಬಳಿಕ ಮುಚ್ಚವುದು ಸೂಕ್ತ" ಎಂದು ವಿಧಾನ ಸಭಾ ಚುನಾವಣೆಗೆ ಮುನ್ನ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಕಚೇರಿ ಕೇಂದ್ರ ಕಚೇರಿಗೆ ವರದಿ ಸಲ್ಲಿಸಿತ್ತು. ತಿಂಗಳ ಹಿಂದೆ ಸ್ಥಳೀಯ ಶಾಸಕ ಭರತ್ ಶೆಟ್ಟಿ ಜೊತೆಗೆ ಸುರತ್ಕಲ್ ನಲ್ಲಿ ಪತ್ರಿಕಾಗೋಷ್ಟಿ ನಡೆಸಿದ ಸಂಸದ ನಳಿನ್ ಕುಮಾರ್ ಕಟೀಲ್, ಜು. 31 ಕ್ಕೆ ಗುತ್ತಿಗೆ ಅವಧಿ ಮುಕ್ತಾಯಗೊಂಡ ನಂತರ ಯಾವುದೇ ಕಾರಣಕ್ಕೂ ಸುರತ್ಕಲ್ ಟೋಲ್ ಗೇಟ್ ಮುಂದುವರಿಯುವುದಿಲ್ಲ, ಅದನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಿಲೀನಗೊಳಿಸಲಾಗುವುದು" ಎಂದು ಹೇಳಿಕೆ ನೀಡಿದ್ದರು. ಆದರೆ ಈಗ ಟೋಲ್ ಸಂಗ್ರಹದ ಗುತ್ತಿಗೆ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಮತ್ತೊಂದು ಅವಧಿಗೆ ಟೋಲ್ ಸಂಗ್ರಹ ನವೀಕರಣಗೊಂಡಿದೆ. "ಈ ನವೀಕರಣ ಪ್ರಕ್ರಿಯೆ ಸಂಸದ ನಳಿನ್ ಕಟೀಲ್ ನಿರ್ದೇಶನದಂತೆ ನಡೆದಿದೆ. ಇದರಿಂದ ಸಂಸದರ ಜನವಿರೋಧಿ ರಾಜಕಾರಣದ ಬಣ್ಣಬಯಲಾಗಿದೆ ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಸುರತ್ಕಲ್ ಟೋಲ್ ಗೇಟ್ ಜನತೆಯ ವಿರೋಧದ ಮಧ್ಯೆ ಅಕ್ರಮವಾಗಿ ನಿರ್ಮಾಣಗೊಂಡಿತ್ತು. ಹತ್ತು ಕಿಮೀ ಅಂತರದ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡ ನಂತರ ಸುರತ್ಕಲ್ ಟೋಲ್ ಗೇಟ್ ಮುಚ್ಚುವುದಾಗಿ ಜನತೆಗೆ ಭರವಸೆ ನೀಡಿ ಟೋಲ್ ಕೇಂದ್ರ ಆರಂಭಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಹೆಜಮಾಡಿ, ಸುರತ್ಕಲ್ ಎರಡೂ ಟೋಲ್ ಕೇಂದ್ರಗಳು ಸುಂಕ ಸಂಗ್ರಹಿಸುವ ಮೂಲಕ ಹಗಲು ದರೋಡೆ ನಡೆಸಲಾಗುತ್ತಿತ್ತು. ಇಂತಹ ಅಕ್ರಮ ಟೋಲ್ ಸಂಗ್ರಹ, ಹೆದ್ದಾರಿ ತುಂಬಾ ಬಿದ್ದಿದ್ದ ಬೃಹತ್ ಗುಂಡಿಗಳಿಂದಾಗಿ ಉಂಟಾಗಿದ್ದ ಅವ್ಯವಸ್ಥೆಯ ವಿರುದ್ಧ ಹಾಗೂ ಈ ಅಕ್ರಮಗಳಿಗೆ ಸಂಸದರ ಮೌನ ಸಮ್ಮತಿಯನ್ನು ಖಂಡಿಸಿ 'ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ' ಸತತ ಪ್ರತಿಭಟನೆ ನಡೆಸಿತ್ತು. ಜನತೆಯ ಸತತ ವಿರೋಧದಿಂದಾಗಿ ಹೆದ್ದಾರಿ ಪ್ರಾಧಿಕಾರದ ಸ್ಥಳೀಯ ಕಚೇರಿ ಕೊನೆಗೂ 'ಗುತ್ತಿಗೆ ನವೀಕರಿಸದಿರುವುದು ಸೂಕ್ತ' ಎಂದು ವರದಿ ಸಲ್ಲಿಸಿತ್ತು. 

ಈ ಎಲ್ಲದರ ನಡುವೆ, ಹೊಂಡಗುಂಡಿಗಳನ್ನು ಕನಿಷ್ಟ ಮುಚ್ಚುವ ಕೆಲಸವನ್ನೂ ಮಾಡದ ಪ್ರಾಧಿಕಾರ, ಈಗ ಅಕ್ರಮ ಸುಂಕ ಸಂಗ್ರಹದ ಗುತ್ತಿಗೆ ನವೀಕರಿಸಿರು ವುದು ಜನತೆಗೆ ಮಾಡಿದ ಮಹಾ ಮೋಸ. ಈ ನವೀಕರಣದ ಹಿಂದೆ ಗುತ್ತಿಗೆದಾರರು, ಪ್ರಾಧಿಕಾರದ ಅಧಿಕಾರಿಗಳ ಜೊತೆಗೆ ಆಡಳಿತ ಪಕ್ಷದ ಸಂಸದ ನಳಿನ್ ಕುಮಾರ್ ಕಟೀಲ್ ಶಾಮೀಲಾಗಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಹೇಳಿದ್ದಾರೆ.

ಜು. 31 ಕ್ಕೆ ಮುಚ್ಚುವ ಬಗ್ಗೆ ಹೇಳಿದ್ದ ಸಂಸದರ ಶಾಮೀಲಾತಿ ಇಲ್ಲದೆ ನಿಯಮದ ಬೆಂಬಲವಿಲ್ಲದ ಟೋಲ್ ಸಂಗ್ರಹ ನವೀಕರಣ ಅಸಾಧ್ಯ. ಇದು ಸತತವಾಗಿ ತನ್ನನ್ನು ಬೆಂಬಲಿಸುತ್ತಿರುವ ಜಿಲ್ಲೆಯ ಜನತೆಗೆ ಸಂಸದರು ಮಾಡಿದ ದ್ರೋಹ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗುವ ಯಾವ ರಾಷ್ಟ್ರೀಯ ಹೆದ್ದಾರಿ ಗಳನ್ನೂ ಸುಸ್ಥಿತಿಯಲ್ಲಿ ಇಡಲು ಅಸಮರ್ಥರಾಗಿರುವ ಸಂಸದ ನಳಿನ್ ಕುಮಾರ್ ಕಟೀಲರು ಜನತೆಯ ಕಿಸೆಗೆ ಅಕ್ರಮವಾಗಿ ಕತ್ತರಿಹಾಕುವ ಟೋಲ್ ಕೇಂದ್ರದ ಗುತ್ತಿಗೆ ನವೀಕರಣದಲ್ಲಿ ಮಾತ್ರ ಉತ್ಸಾಹದಿಂದ ಶಾಮೀಲಾಗಿರುವುದನ್ನು ಜನತೆ ಕ್ಷಮಿಸುವುದಿಲ್ಲ. ಈ ಅಕ್ರಮದ ವಿರುದ್ಧ ಸುರತ್ಕಲ್ ಟೋಲ್ ವಿರೋಧಿ ಹೋರಾಟ ಸಮಿತಿಯು ಜನತೆಯನ್ನು ಸಂಘಟಿಸಿ ತೀವ್ರ ಪ್ರತಿಭಟನೆಯನ್ನು ನಡೆಸಲಿದೆ ಎಂದು 'ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ'ಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News