ಪ್ರಧಾನಿಯ ವಿದ್ಯಾರ್ಹತೆ: ಸತ್ಯವೇನು?

Update: 2018-07-30 13:30 GMT

ನರೇಂದ್ರ ಮೋದಿಯವರ ವಿದ್ಯಾರ್ಹತೆಯ ಚರ್ಚೆ ಅವರು ಪ್ರಧಾನಿ ಕುರ್ಚಿಯಲ್ಲಿ ಕೂತಂದಿನಿಂದ ಪ್ರಾರಂಭವಾಗಿದೆ. ಪ್ರಧಾನಿಯವರ ಕಾರ್ಯಾಲಯ ಅಥವಾ ಸ್ವತಃ ಪ್ರಧಾನಿಯವರೇ ಅವರ ನಿಜವಾದ ವಿದ್ಯಾರ್ಹತೆಯ ದಾಖಲೆಯನ್ನು ನೀಡುವವರೆಗೆ ಈ ಚರ್ಚೆ ಆಗಾಗ ಏಳುತ್ತಲೇ ಇರುತ್ತದೆ. ಮೊನ್ನೆ ಟ್ವಿಟರಿಗರೊಬ್ಬರು ನೇರವಾಗಿ ಪ್ರಧಾನಿಯವರಲ್ಲಿ ಟ್ವಿಟರ್ ಮೂಲಕ ಈ ಪ್ರಶ್ನೆ ಎತ್ತಿದ್ದರಿಂದ ಮತ್ತೆ ಅದು ಚಾಲನೆಗೆ ಬಂದಿದೆ.

ಈ ದೇಶದಲ್ಲಿ ಅದೆಷ್ಟು ಪ್ರಧಾನಿಗಳು ಆಗಿ ಹೋಗಿಲ್ಲ. ಅವರ್ಯಾರ ವಿದ್ಯಾರ್ಹತೆ ಈ ವರೆಗೆ ಚರ್ಚೆಗೆ ಬರಲಿಲ್ಲ. ಮೋದಿಯವರ ವಿದ್ಯಾರ್ಹತೆಯೇ ಚರ್ಚಾ ವಸ್ತುವಾಗಿದ್ದರ ಹಿಂದೆ ಕಾರಣಗಳಿಲ್ಲದಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಅವರು ಕಲಿತ ಕೋರ್ಸೆಂದು ಹೇಳಲಾಗುವ M.A. (Entire political science) ಎಂಬ ಸ್ನಾತಕೋತ್ತರ ಪದವಿಯನ್ನು ಈವರೆಗೆ ಭಾರತದ ಯಾವ ವಿಶ್ವವಿದ್ಯಾನಿಲಯವೂ ನೀಡಿದ ಬಗ್ಗೆ ದಾಖಲೆಯಿಲ್ಲ. ಇಂತಹ ಅಸ್ತಿತ್ವದಲ್ಲೇ ಇರದ ಒಂದು ಪದವಿ ಪಡೆದಿದ್ದಾರೆಂದರೆ ಅದನ್ನು ಸುಳ್ಳೆಂದು ಸಾಬೀತುಪಡಿಸಲು ಬೇರೇನು ಬೇಕು...

ಸರಿ, ಅವರು ಇಂತಹ ಒಂದು ಪದವಿ ಪಡೆದಿದ್ದರೆ ಆ ಪದವಿ ಪಡೆದ ಮೋದಿಯೇತರ ವ್ಯಕ್ತಿ ಯಾರಾದರೂ ಇದ್ದಿದ್ದರೆ ಪ್ರಧಾನಿಯವರೇ ತೋರಿಸಲಿ. ಎಲ್ಲರಿಗೂ ಸಹಪಾಠಿಗಳಿರುತ್ತಾರೆ, ಹಾಗೆ ತಾನು ಪ್ರಧಾನಿಯ ಸಹಪಾಠಿ ಎಂದು ಹೆಮ್ಮೆಯಿಂದ ಹೇಳಿದ ಒಬ್ಬನೇ ಒಬ್ಬ ವ್ಯಕ್ತಿ ಯಾಕೆ ಇಷ್ಟು ದೊಡ್ಡ ದೇಶದಲ್ಲಿಲ್ಲ.

ಒಂದು ವೇಳೆ ಅವರು ಅಂತಹ ಪದವಿಗೆ ಕಲಿಯುವಾಗ ಅವರಿಗೆ ಕಲಿಸಿದ ಗುರು ಯಾರಾದರೂ ಇದ್ದಿದ್ದರೆ ಅವರಾದರೂ ಹೆಮ್ಮೆಯಿಂದ "ಮೋದಿ ನನ್ನ ಶಿಷ್ಯ" ಎನ್ನುತ್ತಿರಲಿಲ್ಲವೇ...?

ಮೋದಿಯವರು ನಿಜಕ್ಕೂ ಅಂತಹ ಪದವಿ ಪಡೆದಿದ್ದರೆ ಆ ಕುರಿತು ಹಾಕಲಾದ ಆರ್ ಟಿಐ ಅರ್ಜಿಗಳನ್ನೆಲ್ಲಾ ಯಾಕೆ ವಿಶ್ವವಿದ್ಯಾನಿಲಯ ಪರಿಗಣಿಸದೇ ಕಸದ ಬುಟ್ಟಿಗೆ ಎಸೆಯುತ್ತದೆ?, ಅವರು ಕಲಿತಿದ್ದಾರೆನ್ನುವ ವಿಶ್ವವಿದ್ಯಾನಿಲಯವಾದರೂ ಮೋದಿ ನಮ್ಮ ವಿದ್ಯಾರ್ಥಿ ಎಂದು ಅಭಿಮಾನಪೂರ್ವಕವಾಗಿ ಯಾಕೆ ಹೇಳುತ್ತಿಲ್ಲ..?

ಎಲ್ಲಾ ಬಿಡಿ. ತನ್ನ ವಿದ್ಯಾರ್ಹತೆಯ ಕುರಿತಂತೆ ಇಷ್ಟೆಲ್ಲಾ ಚರ್ಚೆ ನಡೆಯುತ್ತಿರುವಾಗಲೂ ಮೋದಿಯವರೇ ಅವರು ಕಲಿತ ವಿಶ್ವ ವಿದ್ಯಾನಿಲಯಕ್ಕೆ ತನ್ನ ವಿದ್ಯಾರ್ಹತೆಯ ಕುರಿತ ದಾಖಲೆ, ವ್ಯಾಸಂಗ ಮಾಡಿದ್ದ ಸಂದರ್ಭದ ದಾಖಲೆ ಇತ್ಯಾದಿಗಳನ್ನು ಬಹಿರಂಗಪಡಿಸಲು ಆದೇಶಿಸಬಾರದೇಕೆ?

ಮೋದಿಯವರು ಒಂದು ವೇಳೆ ನಿಜಕ್ಕೂ ಸತ್ಯವನ್ನೇ ಹೇಳುತ್ತಿದ್ದಾರೆಂದರೆ ಅವರಿಗ್ಯಾಕೆ ತನ್ನ ವಿದ್ಯಾರ್ಹತೆಯ ಬಗ್ಗೆ ಬಹಿರಂಗವಾಗಿ ದಾಖಲೆ ನೀಡಲು ಭಯ?, ಎಲ್ಲದಕ್ಕೂ ಸುಳ್ಳೋ ಪಳ್ಳೋ ಉತ್ತರ ನೀಡಿ ಟೀಕಾಕಾರರ ಬಾಯಿ ಮುಚ್ಚಿಸುವ ಮೋದಿ ಈ ವಿಚಾರದಲ್ಲಿ ಯಾಕೆ ಮೌನ ಮುರಿಯುವುದಿಲ್ಲ?, ಇವೆಲ್ಲವೂ ಮೋದಿಯವರಿಗೆ ಹೇಳತಕ್ಕಂತಹ ಯಾವುದೇ ವಿದ್ಯಾರ್ಹತೆ ಇಲ್ಲ ಎಂಬುವುದಕ್ಕೆ ಬಲವಾದ ಸಾಕ್ಷ್ಯವೊದಗಿಸುತ್ತದೆ.

ಮೋದಿಯವರು ಉನ್ನತ ಶಿಕ್ಷಣ ಪಡೆದಿಲ್ಲ ಎಂಬುವುದು ನಿಜಕ್ಕೂ ಸಮಸ್ಯೆಯಲ್ಲ. ಅವರ ಸುಳ್ಳೇ ನಿಜವಾದ ಸಮಸ್ಯೆ. ಈ ರೀತಿ ಕಟ್ಟಿದ ಸುಳ್ಳಿನ ಗೋಪುರ ಬಹಳ ಕಾಲ ಬಾಳುವುದಿಲ್ಲ. ಈಗಾಗಲೇ ಆ ಸುಳ್ಳಿನ ಗೋಪುರ ಅಲುಗಾಡುತ್ತಿದೆ.

ಒಂದು ವೇಳೆ ಮೋದಿ ಹತ್ತನೇ ಕ್ಲಾಸೂ ಪಾಸಾಗಿಲ್ಲ ಎಂದಿದ್ದರೆ ಅದು ಖಂಡಿತಾ ತಪ್ಪೇ ಅಲ್ಲ. ಹಾಗೆ ನೋಡಹೋದರೆ ನಮ್ಮ ಸಂವಿಧಾನದಲ್ಲಿ ಪ್ರಧಾನಿ ಹುದ್ದೆಗೆ ಇಂತಹದ್ದೇ ವಿದ್ಯಾರ್ಹತೆ ಕಡ್ಡಾಯವೆಂದಿಲ್ಲ. ಈ ಹಿಂದೆಯೂ ಅನೇಕ ಮಂದಿ ವಿದ್ಯಾರ್ಹತೆ ಇಲ್ಲದವರೂ ಈ ದೇಶದ ಉನ್ನತ ಸ್ಥಾನಮಾನಗಳನ್ನು ಅಲಂಕರಿಸಿದ್ದಾರೆ. ಉದಾಹರಣೆಗೆ ಎ.ಐ‌.ಸಿ.ಸಿ. ಅಧ್ಯಕ್ಷರಾಗಿದ್ದ ಕಾಮರಾಜ್ ನಾಡಾರ್ ಅವರಿಗೆ ಅಂತಹ ಯಾವುದೇ ದೊಡ್ಡ ವಿದ್ಯಾರ್ಹತೆ ಇರಲಿಲ್ಲ. ವಿದ್ಯಾರ್ಹತೆಯೇ ಖಂಡಿತಾ ಎಲ್ಲವೂ ಅಲ್ಲ. ವಿದ್ಯಾರ್ಹತೆ ಇಲ್ಲದವರೂ ದೊಡ್ಡ ದೊಡ್ಡ ಅಧಿಕಾರದ ಹುದ್ದೆಗಳನ್ನು ನಿಭಾಯಿಸಿ ಸೈ ಎನಿಸಿಕೊಂಡದ್ದಿದೆ.

ಒಂದು ವೇಳೆ ಮೋದಿಯವರು ತನ್ನ ವಿದ್ಯಾರ್ಹತೆಯ ಬಗ್ಗೆ ಸತ್ಯವನ್ನೇ ನುಡಿದಿದ್ದರೆ ಅವರ ಬಗ್ಗೆ ವಿರೋಧಿಗಳಲ್ಲೂ ಗೌರವ ಹುಟ್ಟುತ್ತಿತ್ತು.‌ ಅದು ನಮ್ಮ ಪ್ರಜಾತಂತ್ರ ನಿಜವಾದ ಚೈತನ್ಯ ಎನಿಸುತ್ತಿತ್ತು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News