ಜೈಲಿನಿಂದ ಬಿಡುಗಡೆಯಾದ ಅಹದ್ ತಮೀಮಿಗೆ ಭವ್ಯ ಸ್ವಾಗತ

Update: 2018-07-30 14:05 GMT

ನಬಿ ಸಾಲಿಹ್ (ಆಕ್ರಮಿತ ಪಶ್ಚಿಮ ದಂಡೆ), ಜು. 30: ಇಸ್ರೇಲ್ ಸೈನಿಕರಿಗೆ ತುಳಿದು ಕೆನ್ನೆಗೆ ಹೊಡೆದುಕ್ಕಾಗಿ 8 ತಿಂಗಳು ಜೈಲುವಾಸ ಅನುಭವಿಸಿದ ಬಳಿಕ ರವಿವಾರ ಬಿಡುಗಡೆಯಾದ ಫೆಲೆಸ್ತೀನ್ ಯುವತಿ ಅಹದ್ ತಮೀಮಿಗೆ ಜನರು ಭವ್ಯ ಸ್ವಾಗತ ನೀಡಿದರು.

17 ವರ್ಷದ ತಮೀಮಿ ಮತ್ತು ಅವರ ತಾಯಿ ನರೀಮನ್ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ತಮ್ಮ ಗ್ರಾಮ ನಬಿ ಸಾಲಿಹ್‌ಗೆ ಆಗಮಿಸಿದಾಗ ಜನರು ಹಾಗೂ ಪತ್ರಕರ್ತರು ಅವರನ್ನು ಮುತ್ತಿಕೊಂಡರು.

ಇಸ್ರೇಲ್ ಮೋಟಾರ್ ಸೈಕಲ್ ಸವಾರರ ಮೇಲೆ ಫೆಲೆಸ್ತೀನಿಯರು ಕಲ್ಲು ಎಸೆಯುವುದನ್ನು ತಡೆಯುವುದಕ್ಕಾಗಿ ನಿಯೋಜಿಸಲಾಗಿದ್ದ ಇಸ್ರೇಲ್ ಸೈನಿಕರಿಗೆ ತಮೀಮಿ ಮತ್ತು ಅವರ ಸೋದರ ಸಂಬಂಧಿ ಒದೆ ನೀಡಿದ್ದಾರೆ ಹಾಗೂ ಅವರ ಕೆನ್ನೆಗಳಿಗೆ ಬಾರಿಸಿದ್ದಾರೆ. ಈ ದೃಶ್ಯವನ್ನು ತಾಯಿ ನರೀಮನ್ ಸೆರೆಹಿಡಿದಿದ್ದರು.

ಸೋದರ ಸಂಬಂಧಿಯನ್ನೂ ಪೊಲೀಸರು ಬಂಧಿಸಿದ್ದಾರಾದರೂ, ಮಾರ್ಚ್‌ನಲ್ಲಿ ಆಕೆಯನ್ನು ಬಿಡುಗಡೆ ಮಾಡಲಾಗಿದೆ.

ಇದೇ ಘಟನೆಗೆ ಸಂಬಂಧಿಸಿ ತಮೀಮಿ ತಾಯಿ ನರೀಮನ್ ಕೂಡ ಜೈಲು ವಾಸ ಅನುಭವಿಸಿದ್ದಾರೆ.

ಈ ಘಟನೆಯ ಬಳಿಕ ತಮೀಮಿ ಇಸ್ರೇಲ್ ವಿರುದ್ಧದ ಫೆಲೆಸ್ತೀನ್ ಪ್ರತಿರೋಧದ ಸಂಕೇತವಾಗಿದ್ದಾರೆ.

‘‘ಆಕ್ರಮಣ ಕೊನೆಗೊಳ್ಳುವವರೆಗೆ ಪ್ರತಿರೋಧ ಮುಂದುವರಿಯುತ್ತದೆ. ಅದೇ ವೇಳೆ, ಜೈಲಿನಲ್ಲಿರುವ ಮಹಿಳಾ ಕೈದಿಗಳು ಬಲಿಷ್ಠರಾಗಿದ್ದಾರೆ’’ ಎಂದು ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ತಮೀಮಿ ಹೇಳಿದರು.

ಮಾಧ್ಯಮದಿಂದ ದೂರವಿಡಲು ಯತ್ನಿಸಿದ ಇಸ್ರೇಲ್

ತಮೀಮಿ ಮತ್ತು ಅವರ ತಾಯಿಯ ಬಿಡುಗಡೆಯನ್ನು ಮಾಧ್ಯಮಗಳಿಂದ ದೂರವಿಡಲು ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಇಸ್ರೇಲ್ ಅಧಿಕಾರಿಗಳು ಮಾಡಿದ್ದಾರೆ.

ಬಿಡುಗಡೆಯ ಬಗ್ಗೆ ಅಸ್ಪಷ್ಟ ಮಾಹಿತಿ ನೀಡಿದ ಅಧಿಕಾರಿಗಳು ಪತ್ರಕರ್ತರು ಮತ್ತು ಬೆಂಬಲಿಗರು ಸ್ಥಳಕ್ಕೆ ಸರಿಯಾದ ಸಮಯಕ್ಕೆ ಬರುವುದನ್ನು ತಡೆಯಲು ಯತ್ನಿಸಿದರು.

ಅದೂ ಅಲ್ಲದೆ, ಅವರನ್ನು ಫೆಲೆಸ್ತೀನ್‌ಗೆ ಕರೆದೊಯ್ಯುವ ಮಾರ್ಗವನ್ನು ಹಲವು ಬಾರಿ ಬದಲಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News