ಇಂಡೋನೇಶ್ಯ: ಅಗ್ನಿಪರ್ವತದಲ್ಲಿ ಸಿಕ್ಕಿ ಹಾಕಿಕೊಂಡ ನೂರಾರು ಚಾರಣಿಗರು
Update: 2018-07-30 19:43 IST
ಜಕಾರ್ತ, ಜು. 30: ಇಂಡೋನೇಶ್ಯದ ಲೊಂಬೊಕ್ ದ್ವೀಪದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿದ ಒಂದು ದಿನದ ಬಳಿಕ ಮೌಂಟ್ ರಿಂಜನಿ ಜ್ವಾಲಾಮುಖಿ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿರುವ ಹಲವು ನೂರು ಚಾರಣಿಗರನ್ನು ರಕ್ಷಿಸಲು ಸೋಮವಾರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.
ಭೂಕಂಪ ಸಂಭವಿಸಿದಾಗ ಜ್ವಾಲಾಮುಖಿ ಪರ್ವತದಲ್ಲಿ 820 ಮಂದಿ ಇದ್ದರು ಹಾಗೂ ಅವರ ಪೈಕಿ 246 ಮಂದಿಯನ್ನು ರಕ್ಷಿಸಲಾಗಿದೆ ಎಂದು ಇಂಡೋನೇಶ್ಯದ ವಿಪತ್ತು ನಿರ್ವಹಣೆ ಪ್ರಾಧಿಕಾರದ ವಕ್ತಾರರು ತಿಳಿಸಿದರು. ಚಾರಣಿಗರ ಪೈಕಿ 617 ಮಂದಿ ವಿದೇಶಿಯರು.
ಭೂಕಂಪದ ಬಳಿಕ ಎರಡು ದಾರಿಗಳು ಮುಚ್ಚಿಹೋದ ಹಿನ್ನೆಲೆಯಲ್ಲಿ ಚಾರಣಿಗರು ಪರ್ವತದಲ್ಲಿ ಸಿಲುಕಿಕೊಂಡಿದ್ದಾರೆ.
ಚಾರಣಿಗರಿಗೆ ಆಹಾರ ನೀಡಲು ಹಾಗೂ ಅವರನ್ನು ಪರ್ವತದಿಂದ ಹೊರಗೆ ಕರೆದುಕೊಂಡು ಬರಲು ಎರಡು ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ ಎಂದು ‘ಡೆಟಿಕ್’ ವೆಬ್‌ಸೈಟ್ ವರದಿ ಮಾಡಿದೆ.