ಐಎಂಎಫ್ ಸಾಲವನ್ನು ಚೀನಾ ಸಾಲ ಮರುಪಾವತಿಗೆ ಬಳಸಬೇಡಿ: ಅಮೆರಿಕ ಎಚ್ಚರಿಕೆ

Update: 2018-07-31 15:57 GMT

ವಾಶಿಂಗ್ಟನ್, ಜು. 31: ಪಾಕಿಸ್ತಾನದ ನೂತನ ಸರಕಾರಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಸಾಲ ನೀಡಿದರೆ, ಆ ಹಣವನ್ನು ಚೀನಾದ ಸಾಲಗಾರರಿಗೆ ಮರುಪಾವತಿ ಮಾಡಲು ಬಳಸಬಾರದು ಎಂಬುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಸೋಮವಾರ ಎಚ್ಚರಿಸಿದ್ದಾರೆ.

ಪಾಕಿಸ್ತಾನ ಸರಕಾರದ ನೂತನ ನಿರೀಕ್ಷಿತ ಪ್ರಧಾನಿ ಇಮ್ರಾನ್ ಖಾನ್‌ರೊಂದಿಗೆ ಮಾತುಕತೆ ನಡೆಸುವುದನ್ನು ಅಮೆರಿಕ ಎದುರು ನೋಡುತ್ತಿದೆ ಎಂದು ಸಿಎನ್‌ಬಿಸಿ ಟೆಲಿವಿಶನ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಪಾಂಪಿಯೊ ಹೇಳಿದರು. ಆದರೆ, ಚೀನಾವು ಪಾಕಿಸ್ತಾನಕ್ಕೆ ನೀಡಿರುವ ಸಾಲವನ್ನು ಮರುಪಾವತಿಸಲು ಐಎಂಎಫ್ ಸಾಲವನ್ನು ಬಳಸುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.

‘‘ತಪ್ಪು ಮಾಡಬೇಡಿ. ಐಎಂಎಫ್ ಏನು ಮಾಡುತ್ತದೆ ಎನ್ನುವುದನ್ನು ನಾವು ಗಮನಿಸುತ್ತೇವೆ’’ ಎಂದು ಅವರು ನುಡಿದರು.

ಐಎಂಎಫ್‌ನಿಂದ 1200 ಕೋಟಿ ಡಾಲರ್ ನೆರವು ಕೋರುವ ಯೋಜನೆಯನ್ನು ಪಾಕಿಸ್ತಾನದ ಹಣಕಾಸು ಸಚಿವಾಲಯದ ಅಧಿಕಾರಿಗಳು ಇಮ್ರಾನ್ ಖಾನ್‌ಗಾಗಿ ಸಿದ್ಧಪಡಿಸುತ್ತಿದ್ದಾರೆ ಎಂಬುದಾಗಿ ‘ಫೈನಾನ್ಶಿಯಲ್ ಟೈಮ್ಸ್’ ರವಿವಾರ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News