ಕೆನಡ: ಭಾರತೀಯ ದಂಪತಿಗೆ ಜನಾಂಗೀಯ ನಿಂದನೆ

Update: 2018-07-31 16:00 GMT

ಟೊರಾಂಟೊ, ಜು. 31: ಸ್ವದೇಶಕ್ಕೆ ಹಿಂದಿರುಗುವಂತೆ ಭಾರತ ಮೂಲದ ದಂಪತಿಗೆ ಕಿರುಕುಳ ನೀಡುತ್ತಿರುವ ಹಾಗೂ ಅವರ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿರುವ  ವ್ಯಕ್ತಿಯೊಬ್ಬನನ್ನು ಕೆನಡದಲ್ಲಿ ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ಈ ಪ್ರಕರಣವನ್ನು ‘ದ್ವೇಷಾಪರಾಧ’ವಾಗಿ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಒಂಟಾರಿಯೊ ರಾಜ್ಯದ ಹ್ಯಾಮಿಲ್ಟನ್ ನಗರದ ವಾಲ್‌ಮಾರ್ಟ್ ಸೂಪರ್‌ಸೆಂಟರ್‌ನಲ್ಲಿ ವಾಹನ ನಿಲ್ಲಿಸುವ ಸ್ಥಳದ ವಿಚಾರದಲ್ಲಿ ಭಾರತೀಯ ಮತ್ತು ಡೇಲ್ ರಾಬರ್ಟ್‌ಸನ್ ನಡುವೆ ಜಗಳ ನಡೆಯಿತು.

ಜಗಳದ ನಡುವೆ, ‘‘ನೀವೆಲ್ಲರೂ ನಿಮ್ಮ ಸ್ವಂತ ದೇಶಕ್ಕೆ ಹೋಗಿ. ಮೊದಲು ನಾನು ನಿಮ್ಮ ಮಕ್ಕಳನ್ನು ಕೊಲ್ಲುತ್ತೇನೆ’’ ಎಂಬುದಾಗಿ ರಾಬರ್ಟ್‌ಸನ್ ಹೇಳುವುದು ವೀಡಿಯೊದಲ್ಲಿ ದಾಖಲಾಗಿದೆ.

ಭಾರತೀಯನ ಪತ್ನಿ ಈ ದೃಶ್ಯಗಳನ್ನು ವೀಡಿಯೊದಲ್ಲಿ ಸೆರೆಹಿಡಿದಿದ್ದಾರೆ.

ಮೂಲತಃ ಭಾರತೀಯರಾದರೂ ದಂಪತಿ ಈಗ ಕೆನಡ ಪ್ರಜೆಗಳಾಗಿದ್ದಾರೆ. ಅವರು 7-8 ವರ್ಷಗಳಿಂದ ಕೆನಡದಲ್ಲಿ ವಾಸಿಸುತ್ತಿದ್ದಾರೆ.

ರಾಬರ್ಟ್‌ಸನ್‌ನನ್ನು ಬಂಧಿಸಿರುವ ಪೊಲೀಸರು, ಅವನ ವಿರುದ್ಧ ಕೊಲೆ ಬೆದರಿಕೆ, ಅಪಾಯಕರ ರೀತಿಯಲ್ಲಿ ವಾಹನ ಚಾಲನೆ ಹಾಗೂ ಅಪಘಾತ ನಡೆದ ಸ್ಥಳದಿಂದ ಪರಾರಿಯಾದ ಆರೋಪಗಳನ್ನು ಹೊರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News