ಇರಾನ್ ಅಧ್ಯಕ್ಷರ ಜೊತೆ ಮಾತುಕತೆಗೆ ಸಿದ್ಧ: ಟ್ರಂಪ್

Update: 2018-07-31 16:05 GMT

ವಾಶಿಂಗ್ಟನ್, ಜು. 31: 2015ರ ಇರಾನ್ ಪರಮಾಣು ಒಪ್ಪಂದದಿಂದ ಅಮೆರಿಕ ಹಿಂದೆ ಸರಿದ ಬಳಿಕ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಯಾವುದೇ ಪೂರ್ವ ಶರತ್ತುಗಳಿಲ್ಲದೆ ಇರಾನ್ ಅಧ್ಯಕ್ಷ ಹಸನ್ ರೂಹಾನಿಯನ್ನು ಭೇಟಿಯಾಗಲು ತಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಅವರು ಭೇಟಿಯಾಗಲು ಬಯಸಿದರೆ ಖಂಡಿತವಾಗಿಯೂ ನಾನು ಅವರನ್ನು ಭೇಟಿಯಾಗುವೆ’’ ಎಂದು ಸೋಮವಾರ ಶ್ವೇತಭವನದಲ್ಲಿ ಇಟಲಿ ಪ್ರಧಾನಿ ಜಿಯುಸೆಪ್ ಕಾಂಟೆ ಜೊತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟಂಪ್ ಹೇಳಿದರು.

‘‘ಅವರು ತಯಾರಿದ್ದಾರೆಯೇ ಎನ್ನುವುದು ನನಗೆ ತಿಳಿದಿಲ್ಲ. ಅವರು ಈಗ ಭಾರೀ ಸಂಕಷ್ಟದಲ್ಲಿ ಸಿಲುಕಿದ್ದಾರೆ’’ ಎಂದು ಟ್ರಂಪ್ ಹೇಳಿದರು.

ಇದೇ ಸಂದರ್ಭದಲ್ಲಿ ಅವರು ಕಳೆದ ತಿಂಗಳು ಸಿಂಗಾಪುರದಲ್ಲಿ ಉತ್ತರ ಕೊರಿಯ ನಾಯಕ ಕಿಮ್ ಜಾಂಗ್ ಉನ್‌ರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡರು.

‘‘ಜಟಿಲ ವಿವಾದಗಳನ್ನು ಪರಿಹರಿಸುವುದಕ್ಕಾಗಿ ಜನರು ಭೇಟಿಯಾಗುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲ’’ ಎಂದು ಟ್ರಂಪ್ ಅಭಿಪ್ರಾಯಪಟ್ಟರು.

ಉಭಯ ನಾಯಕರ ಭೇಟಿಗೆ ಸಂಭಾವ್ಯ ಅವಕಾಶವೆಂದರೆ, ಸೆಪ್ಟಂಬರ್ ಕೊನೆಯಲ್ಲಿ ನಡೆಯುವ ವಿಶ್ವಸಂಸ್ಥೆಯ ವಾರ್ಷಿಕ ಮಹಾಧಿವೇಶನ. ರೂಹಾನಿ ಈ ಅಧಿವೇಶನಕ್ಕೆ ತಪ್ಪದೆ ಹಾಜರಾಗುತ್ತಾರೆ.

ಅಮೆರಿಕ ಪರಮಾಣು ಒಪ್ಪಂದಕ್ಕೆ ಮರಳಲಿ: ಇರಾನ್

ಅಮೆರಿಕದೊಂದಿಗಿನ ಯಾವುದೇ ಮಾತುಕತೆಯು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಹಾಗೂ ಅಮೆರಿಕ ಪರಮಾಣು ಒಪ್ಪಂದಕ್ಕೆ ಮರಳುವ ಮೂಲಕ ಆರಂಭಗೊಳ್ಳಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿಯ ಸಲಹಾಕಾರ ಹಮೀದ್ ಅಬೂತಲೇಬಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

‘‘ಶ್ರೇಷ್ಠ ಇರಾನ್ ದೇಶಕ್ಕೆ ಗೌರವ, ಉದ್ವಿಗ್ನತೆ ಶಮನ, ಪರಮಾಣು ಒಪ್ಪಂದಕ್ಕೆ ಅಮೆರಿಕ ಮರಳುವುದು.... ಮಾತುಕತೆಯ ಕಠಿಣ ದಾರಿಯನ್ನು ಈ ಅಂಶಗಳು ತೆರೆಯುತ್ತವೆ’’ ಎಂದು ಅವರು ಹೇಳಿದ್ದಾರೆ.

ಯಾವುದೇ ಪೂರ್ವಶರತ್ತುಗಳಿಲ್ಲದೆ ಇರಾನ್ ಜೊತೆಗೆ ಮಾತುಕತೆ ನಡೆಸಲು ತಾನು ಸಿದ್ಧ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ ಹೇಳಿಕೆಗೆ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News