×
Ad

ಅಥ್ಲೀಟ್ ಗಳ ವಿಚಾರದಲ್ಲೂ ರಾಜಕೀಯ: ಸತ್ಯ ಮರೆಮಾಚಿ ಸಿಕ್ಕಿಬಿದ್ದ ‘ಪೋಸ್ಟ್ ಕಾರ್ಡ್!’

Update: 2018-07-31 21:43 IST

ಹೊಸದಿಲ್ಲಿ, ಜು.31: “ಸೀ ದಿ ಡಿಫರೆನ್ಸ್” (ವ್ಯತ್ಯಾಸವನ್ನು ಗಮನಿಸಿ) ಹೀಗೆಂದು ಶೀರ್ಷಿಕೆ ನೀಡಿ ಎರಡು ಫೋಟೋಗಳನ್ನು ಒಂದರ ಮೇಲೆ ಒಂದಿರಿಸಿ ಸುಳ್ಳು ಸುದ್ದಿ ಹರಡುವುದರಲ್ಲಿ ಕುಖ್ಯಾತಿ ಗಳಿಸಿರುವ ‘ಪೋಸ್ಟ್ ಕಾರ್ಡ್’ ಇಂಗ್ಲಿಷ್ ವೆಬ್ ತಾಣ ಇತ್ತೀಚೆಗೆ ಪೋಸ್ಟ್ ಮಾಡಿತ್ತು. ಒಂದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಇನ್ನೊಂದರಲ್ಲಿ ಹಾಲಿ ಪ್ರಧಾನಿ ನರೇಂದ್ರ ಮೋದಿ ಇದ್ದಾರೆ. ಎರಡರಲ್ಲೂ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಯಶಸ್ವಿಯಾದ ಭಾರತೀಯ ಅಥ್ಲೀಟುಗಳೊಂದಿಗೆ ಅಂದಿನ ಹಾಗೂ ಇಂದಿನ ಪ್ರಧಾನಿ ಇದ್ದಾರೆಂದು ಪೋಸ್ಟ್ ಕಾರ್ಡ್ ಹೇಳಿದೆ.

ಮನಮೋಹನ್ ಸಿಂಗ್ ಅವರು ಕುಳಿತುಕೊಂಡು ಅಥ್ಲೀಟುಗಳೊಂದಿಗೆ ಪೋಸ್ ನೀಡಿದ್ದರೆ, ಇನ್ನೊಂದರಲ್ಲಿ ಮೋದಿ ನಿಂತುಕೊಂಡಿದ್ದು, ಅಥ್ಲೀಟ್ ಗಳು ಕುಳಿತಿದ್ದಾರೆ. ಮೋದಿ ಅವರ ಜತೆ ಸಂವಾದ ನಡೆಸುತ್ತಿರುವುದು ಕಾಣಿಸುತ್ತದೆ.

ಈ ಪೋಸ್ಟ್ ಅನ್ನು ಜುಲೈ 27ರಂದು ಹಾಕಲಾಗಿದ್ದು, ಇಲ್ಲಿಯ ತನಕ 4,200ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. ಎರಡೂ ಪ್ರಧಾನಿಗಳ ಧೋರಣೆಯಲ್ಲಿ ಭಾರೀ ವ್ಯತ್ಯಾಸವಿದೆಯೆಂದು ಹೇಳುವ ಯತ್ನವನ್ನು ಈ ಚಿತ್ರದ ಮೂಲಕ ಮಾಡಲಾಗಿದೆ. “ವ್ಯತ್ಯಾಸಗಳನ್ನು ಗಮನಿಸಿ, ಚಿತ್ರ 1: ಪದಕ ವಿಜೇತರನ್ನು ಹೊರತುಪಡಿಸಿ ಎಲ್ಲರೂ ಕುಳಿತಿದ್ದಾರೆ, ಚಿತ್ರ 2: ಪ್ರಧಾನಿಯನ್ನು ಹೊರತುಪಡಿಸಿ ಎಲ್ಲರೂ ಕುಳಿತಿದ್ದಾರೆ” ಎಂದು ಬರೆಯಲಾಗಿದೆ.

ವ್ಯತ್ಯಾಸವಿದೆಯೇ ?

ಪೋಸ್ಟ್‍ಕಾರ್ಡ್ ಹೇಳಿದಂತೆ ಎರಡೂ ಚಿತ್ರಗಳಲ್ಲಿ ಆಗಿನ ಮತ್ತು ಈಗಿನ ಪ್ರಧಾನಿ ಕಾಮನ್‍ವೆಲ್ತ್ ಯಶಸ್ವೀ ಕ್ರೀಡಾಳುಗಳ ಜತೆಗೆ ಕಾಣಿಸಿಲ್ಲ. ಸಿಂಗ್ ಅವರು 2012 ಲಂಡನ್ ಒಲಿಂಪಿಕ್ಸ್ ಪ್ರಶಸ್ತಿ ವಿಜೇತರ ಜತೆ ಕಾಣಿಸಿಕೊಂಡಿದ್ದರೆ, ಮೋದಿ 2014ರ ಆಸ್ಟ್ರೇಲಿಯಾ ಕಾಮನ್ವೆಲ್ತ್ ವಿಜೇತ ಕ್ರೀಡಾಳುಗಳ ಜತೆ ಕಾಣಿಸಿಕೊಂಡಿದ್ದರು. ಸಿಂಗ್ ಅವರ ಅದೇ ಫೋಟೋ Firstpostನಲ್ಲಿ ಆಗಸ್ಟ್ 17, 2012ರಂದು ಪ್ರಕಟಗೊಂಡಿದೆ.

ಹಾಗಾದರೆ ಅಥ್ಲೀಟುಗಳ ಜತೆ ಈಗಿನ ಮತ್ತು ಹಿಂದಿನ ಪ್ರಧಾನಿ ನಡೆದುಕೊಂಡ ರೀತಿಯಲ್ಲಿ ವ್ಯತ್ಯಾಸವಿದೆಯೇ?, ಅಂದ ಹಾಗೆ ಪ್ರಧಾನಿ ಮೋದಿ ಕೂಡ ಏಷ್ಯನ್ ಗೇಮ್ಸ್ 2014 ಪದಕ ವಿಜೇತರ ಜತೆ ಹಾಗೂ 2018 ರಿಯೋ ಡಿ ಜನೈರೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ತೆರಳಲಿದ್ದ ಕ್ರೀಡಾಳುಗಳ ಜತೆ ಫೊಟೊ ತೆಗೆಸಿದ್ದರು. ಇವುಗಳಲ್ಲಿ ಮೋದಿ ಕುಳಿತಿದ್ದರೆ, ಅಥ್ಲೀಟುಗಳು ನಿಂತಿದ್ದಾರೆ.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೂಡ ಕ್ರೀಡಾಳುಗಳ ಜತೆ ಸಂವಾದ ನಡೆಸುವ ಫೋಟೋಗಳಿವೆ. ಒಂದು ಫೋಟೋದಲ್ಲಿ ಸಿಂಗ್ ಅವರು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಜತೆ ಮಾತನಾಡುತ್ತಿರುವುದೂ ಕಾಣಿಸುತ್ತದೆ. ಹೀಗಿರುವಾಗ ಅನಗತ್ಯವಾಗಿ ಕೆಲವೊಂದು ಫೋಟೋಗಳನ್ನು ಬಳಸಿಕೊಂಡು ಒಂದು ನಿರ್ದಿಷ್ಟ ಅಭಿಪ್ರಾಯ ಮೂಡುವಂತೆ ಮಾಡಲು ‘ಪೋಸ್ಟ್ ಕಾರ್ಡ್’ ನಡೆಸುತ್ತಿದೆಯೆಂಬುದಂತೂ ಸ್ಪಷ್ಟ.

ಕೃಪೆ: www.altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News