ಜೈಲು ಕೋಣೆಯ ವೀಡಿಯೊ ಸಲ್ಲಿಸಿ: ಭಾರತಕ್ಕೆ ಬ್ರಿಟನ್ ನ್ಯಾಯಾಲಯ ಸೂಚನೆ

Update: 2018-07-31 16:52 GMT

ಲಂಡನ್, ಜು. 31: ಮುಂಬೈಯಲ್ಲಿರುವ ಆರ್ಥರ್ ರೋಡ್ ಜೈಲಿನ ಬರಾಕ್ ಸಂಖ್ಯೆ 12ರಲ್ಲಿರುವ ಸೌಲಭ್ಯಗಳು ಮತ್ತು ವಿವಿಧ ವಿವರಗಳನ್ನು ತೋರಿಸುವ ವೀಡಿಯೊವೊಂದನ್ನು ಸಲ್ಲಿಸುವ ಭರವಸೆಯನ್ನು ಭಾರತ ಸರಕಾರ ಮಂಗಳವಾರ ಲಂಡನ್‌ನ ನ್ಯಾಯಾಲಯಕ್ಕೆ ನೀಡಿದೆ.

ಭಾರತದ ಬ್ಯಾಂಕ್‌ಗಳಿಗೆ 10,000 ಕೋಟಿ ರೂ.ಗೂ ಅಧಿಕ ಹಣವನ್ನು ವಂಚಿಸಿ ಬ್ರಿಟನ್‌ಗೆ ಪರಾರಿಯಾಗಿರುವ ಮಾಜಿ ಉದ್ಯಮಿ ವಿಜಯ ಮಲ್ಯನನ್ನು ಗಡಿಪಾರು ಮಾಡಿದರೆ ಆರ್ಥರ್ ರೋಡ್ ಜೈಲಿನ ಬರಾಕ್ ಸಂಖ್ಯೆ 12ರಲ್ಲಿ ಇಡಲು ಉದ್ದೇಶಿಸಲಾಗಿರುವುದನ್ನು ಸ್ಮರಿಸಬಹುದಾಗಿದೆ.

ಮಲ್ಯನನ್ನು ಗಡಿಪಾರು ಮಾಡುವಂತೆ ಕೋರಿ ಭಾರತ ಸರಕಾರ ಹೂಡಿರುವ ಮೊಕದ್ದಮೆಯ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಸೆಪ್ಟಂಬರ್ 12ಕ್ಕೆ ನಿಗದಿಪಡಿಸಿದ್ದು, ಅದರ ಒಳಗೆ ವೀಡಿಯೊವನ್ನು ಸಲ್ಲಿಸುವುದಾಗಿ ಭಾರತ ಹೇಳಿದೆ.

ಮಂಗಳವಾರದ ವಿಚಾರಣೆಯ ವೇಳೆ ಅಂತಿಮ ವಾದ-ಪ್ರತಿವಾದಗಳು ನಡೆಯಬೇಕಾಗಿದ್ದವು. ಆದರೆ, ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಚೀಫ್ ಮ್ಯಾಜಿಸ್ಟ್ರೇಟ್ ಎಮ್ಮಾ ಆ್ಯರ್ಬತ್‌ನಾಟ್‌ರ ಅಸೌಖ್ಯದ ಹಿನ್ನೆಲೆಯಲ್ಲಿ ಕಿರು ಅವಧಿಯ ವಿಚಾರಣೆ ನಡೆಸಿ ಮುಂದಿನ ವಿಚಾರಣೆಯನ್ನು ಮುಂದೂಡಲಾಯಿತು. ಅದೇ ವೇಳೆ, ಮಲ್ಯನ ಜಾಮೀನನ್ನು ಸೆಪ್ಟಂಬರ್ 12ರವರೆಗೆ ಮುಂದೂಡಲಾಯಿತು.

ಜೈಲಿನಲ್ಲಿ ಬೆಳಕಿಲ್ಲ, ಗಾಳಿಯಿಲ್ಲ ಎಂದ ಮಲ್ಯ

ಭಾರತದ ಜೈಲುಗಳಲ್ಲಿ ನೈಸರ್ಗಿಕ ಬೆಳಕು ಅಥವಾ ತಾಜಾ ಗಾಳಿ ಇಲ್ಲ ಎಂಬುದಾಗಿ ವಿಜಯ ಮಲ್ಯ ಆಕ್ಷೇಪ ವ್ಯಕ್ತಪಡಿಸಿದಾಗ, ಜೈಲು ಕೋಣೆಯ ವೀಡಿಯೊ ಸಲ್ಲಿಸುವಂತೆ ನ್ಯಾಯಾಧೀಶೆ ಭಾರತ ಸರಕಾರಕ್ಕೆ ಸೂಚಿಸಿದರು.

ಭಾರತೀಯ ಅಧಿಕಾರಿಗಳು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಜೈಲು ಕೋಣೆಯ ಚಿತ್ರಗಳನ್ನು ತಾನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ನ್ಯಾಯಾಧೀಶೆ ನುಡಿದರು.

ಚಿತ್ರಗಳಲ್ಲಿ ತೋರಿಸಲಾದ ಬಾಗಿಲಿನ ಮೂಲಕ ಯಾವುದೇ ವ್ಯಕ್ತಿ ಜೈಲಿನ ಒಳಗೆ ಹೋಗುವುದನ್ನು ಚಿತ್ರೀಕರಿಸಿ ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಲ ಇತ್ಯರ್ಥಕ್ಕೆ 2015ರಿಂದಲೂ ಮುಂದಾಗಿದ್ದೆ: ಮಲ್ಯ

ಸಾಲಗಳನ್ನು ಇತ್ಯರ್ಥಪಡಿಸುವ ಕೊಡುಗೆಯನ್ನು ತಾನು 2015ರಿಂದಲೂ ಭಾರತೀಯ ಬ್ಯಾಂಕ್‌ಗಳಿಗೆ ನೀಡುತ್ತಾ ಬಂದಿದ್ದೇನೆ ಎಂದು ನ್ಯಾಯಾಲಯದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ ಮಲ್ಯ ಹೇಳಿದನು.

ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ದಾಖಲೆಗಳಲ್ಲಿ ಒದಗಿಸಲಾಗಿರುವ ತನ್ನ ಆಸ್ತಿಗಳನ್ನು ಬಳಸಿ ಸಾಲಗಳನ್ನು ಇತ್ಯರ್ಥಪಡಿಸುವುದಾಗಿ ಕರ್ನಾಟಕ ಹೈಕೋರ್ಟ್‌ಗೆ ತಾನು ಇತ್ತೀಚೆಗೆ ನೀಡಿರುವ ಭರವಸೆಯನ್ನು ಅವರು ಉಲ್ಲೇಖಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News