ಆ.1 ರಿಂದ ಕರಾವಳಿಯಾದ್ಯಂತ ಮತ್ಸ್ಯ ಬೇಟೆ ಆರಂಭ

Update: 2018-07-31 17:52 GMT

ಕಾರವಾರ, ಜು.31: ಕಳೆದ ಜೂನ್1ರಿಂದ ಸ್ಥಗಿತಗೊಂಡಿದ್ದ ಯಾಂತ್ರೀಕೃತ ಆಳಸಮುದ್ರ ಮೀನುಗಾರಿಕೆ ಆಗಸ್ಟ್ 1ರಿಂದ ಮತ್ತೆ ಪ್ರಾರಂಭವಾಗಲಿದ್ದು, ಮತ್ಸ್ಯಾಹಾರ ಪ್ರಿಯರು ಹಾಗೂ ಕಡಲ ಮಕ್ಕಳು ಹರ್ಷದಲ್ಲಿದ್ದಾರೆ. ಅಲ್ಲದೆ, ಯಾಂತ್ರಿಕೃತ ಮೀನುಗಾರರು ತಮ್ಮ ಬೋಟ್‌ಗಳನ್ನು ಮೀನುಗಾರಿಕೆಗೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. 

ಕಳೆದ 2 ತಿಂಗಳು ಜಿಲ್ಲೆಯಲ್ಲಿ ಮೀನುಗಾರಿಕೆ ನಿಷೇಧವಾಗಿತ್ತು. ಇದೀಗ ಆ.1 ರಿಂದ ಅಧಿಕೃತವಾಗಿ ಯಾಂತ್ರೀಕೃತ ಮೀನುಗಾರಿಕೆ ಆರಂಭವಾಗಲಿದೆ. ಹೀಗಾಗಿ ಬೋಟುಗಳಲ್ಲಿ ಬಲೆ ಸೇರಿದಂತೆ ಅಗತ್ಯ ಪರಿಕರಗಳನ್ನು ತುಂಬಿ ಸಜ್ಜುಗೊಳಿಸುವ ಕಾರ್ಯ ಚಟುವಟಿಕೆಗಳು ಜಿಲ್ಲೆಯ ವಿವಿಧ ಮೀನುಗಾರಿಕಾ ಬಂದರುಗಳಲ್ಲಿ ಜೋರಾಗಿ ನಡೆದಿದೆ. ಇಲ್ಲಿನ ಬೈತಖೋಲ್ ಮೀನುಗಾರಿಕಾ ಬಂದರು, ಬೇಲೆಕೇರಿ, ಹೊನ್ನಾವರ, ಭಟ್ಕಳ ಮುಂತಾದ ಮೀನುಗಾರಿಕಾ ಬಂದರುಗಳಲ್ಲಿ ಬಿರುಸಿನ ಕಾರ್ಯ ಚಟುವಟಿಕೆಗಳು ಆರಂಭವಾಗಿದೆ. ಪರ್ಸೀನ್ ಬೋಟ್ ಹಾಗೂ ಟ್ರಾಲರ್ ಬೋಟ್‌ಗಳ ಮೂಲಕ ಮೀನುಗಾರಿಕೆ ನಡೆಸಲು ಮೀನುಗಾರರು ಸಕಲ ಸಿದ್ಧತೆಯಲ್ಲಿ ತೊಡಗಿದ್ದಾರೆ. ಮೀನುಗಳ ಸಂತಾನೋತ್ಪತ್ತಿಯ ಅವಧಿಯಾಗಿರುವ ಕಾರಣ ಸರಕಾರದ ಆದೇಶದ ಪ್ರಕಾರ ಜೂನ್ 1 ರಿಂದ ಜುಲೈ 31ರ ವರೆಗೆ ಕಡಲಿನಲ್ಲಿ ಯಾಂತ್ರೀಕೃತ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತದೆ. ಹೀಗಾಗಿ ಎರಡು ತಿಂಗಳ ಕಾಲ ಕರಾವಳಿಯಾದ್ಯಂತ ಮೀನುಗಾರಿಕೆ ಬಂದ್ ಮಾಡಲಾಗಿತ್ತು. ಈ ಅವಧಿಯಲ್ಲಿ ಬೋಟುಗಳ ದುರಸ್ತಿಗೊಳಿಸಿ, ಎಂಜಿನ್ ಕಾರ್ಯಕ್ಷಮತೆ ಪರೀಕ್ಷೆ, ಬಲೆ ನೇಯುವುದು ಸೇರಿದಂತೆ ಎಲ್ಲ ರೀತಿಯ ತಯಾರಿ ನಡೆಸಿ ಆಗಸ್ಟ್ 1 ರಿಂದ ಮೀನುಗಾರಿಕೆಗೆ ತೆರಳಲು ಮೀನುಗಾರರು ಸನ್ನದ್ಧರಾಗಿದ್ದಾರೆ.

ಬಂದರಿನಲ್ಲಿ ಬೋಟ್‌ನ ಕ್ಯಾಬಿನ್, ಡಿಂಗಿ ದೋಣಿಗಳನ್ನು ದುರಸ್ತಿ ಗೊಳಿಸಿ ಬಣ್ಣ ಬಳಿಯುವುದರಲ್ಲಿ ಕಾರ್ಮಿಕರು ತಲ್ಲೀನರಾಗಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ. ಕಳೆದ ವರ್ಷದ ಮೀನುಗಾರಿಕಾ ಅಧಿಯಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮೀನು ದೊರಕದೆ ಮೀನುಗಾರರು ನಿರಾಶೆ ಅನುಭವಿಸಿದ್ದರು. ಮೇ 31ಕ್ಕೆ ಮೀನುಗಾರಿಕೆ ಸ್ಥಗಿತಗೊಳಿಸಬೇಕಿತ್ತಾದೂ ಮೀನುಗಳ ಅಭಾವದಿಂದಾಗಿ ಸುಮಾರು 15 ದಿನಗಳ ಮೊದಲೇ ಬಂದ್ ಮಾಡಿದ್ದರು.

ಪ್ರಸಕ್ತ ಕಡಲ ಅಬ್ಬರ ಜೋರಾಗಿರುವುದರಿಂದ ರವೀಂದ್ರನಾಥ ಟ್ಯಾಗೋರ್ ಕಡಲ ತೀರದ ಮೇಲೆ ಸಾಂಪ್ರದಾಯಿಕ ಮೀನುಗಾರಿಕೆಗೂ ಈ ಬಾರಿ ಹೊಡೆತ ಬಿದ್ದಿದೆ. ಇನ್ನು ನಿರೀಕ್ಷಿತ ಪ್ರಮಾಣದಲ್ಲಿ ಮೀನು ಸಿಗದೇ ಏಂಡಿ ಬಲೆಗಾರರು ಕಂಗಾಲಾಗಿದ್ದಾರೆ. ಈ ನಡುವೆ ಪ್ರಸಕ್ತ ವರ್ಷದ ಮೀನುಗಾರಿಕಾ ಹಂಗಾಮಿನಲ್ಲಾದರೂ ಲೈಟ್ ಫಿಶಿಂಗ್ ಸಂಪೂರ್ಣವಾಗಿ ನಿಲ್ಲಬೇಕು. ಇದರಿಂದ ಈ ಹಂಗಾಮಿನಲ್ಲಿ ಯತೇಚ್ಛವಾಗಿ ಮೀನು ದೊರೆತು ಉದ್ಯಮ ಚೇತರಿಸಿಕೊಳ್ಳುವಂತಾಗಲಿ ಎಂದು ಇಲ್ಲಿನ ಮೀನುಗಾರರು ಅಭಿಪ್ರಾಯ ವ್ಯಕ್ತಪಡಿಸಿದಾರೆ.

ನಿಷೇಧದ ಹಿನ್ನೆಲೆಯಲ್ಲಿ ರಾತ್ರಿ ವೇಳೆಯಲ್ಲಿ ಕೆಲ ಮೀನುಗಾರರು ಲೈಟ್ ಫಿಷಿಂಗ್ ನಡೆಸಿದ ಮೀನುಗಾರರಿಗೆ ಮೀನುಗಾರಿಕಾ ಇಲಾಖೆ ಶಾಕ್ ನೀಡಿದೆ. ಯಾಂತ್ರಿಕ ಬೋಟ್‌ಗಳು ಆಳ ಸಮದ್ರದಲ್ಲಿ ಮೀನುಗಾರಿಕೆ ನಡೆಸಲು ಜುಲೈ 31ರ ವರೆಗೆ ನಿಷೇಧವಿತ್ತು. ಆದರೆ, ಕೆಲವು ಬೋಟ್ ಮಾಲಕರು ನಿಷೇಧದ ನಡುವೆಯೂ ಲೈಟ್ ಫಿಷಿಂಗ್ ಮೀನುಗಾರಿಕೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೊನ್ನಾವರ, ಭಟ್ಕಳಗಳಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೂರು ಬೋಟುಗಳು ಸಮುದ್ರಪಾಲಾಗಿದ್ದು, ಒಬ್ಬ ಮೀನುಗಾರ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರೆ ನಾಲ್ಕು ಜನರನ್ನು ರಕ್ಷಿಸಲಾಗಿತ್ತು. ಹೀಗಾಗಿ ಮೀನುಗಾರಿಕಾ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಲೈಟ್ ಫಿಷಿಂಗ್ ನಡೆಸುವ ಮೀನುಗಾರರಿಗೆ ಇಲಾಖೆ ದಂಡ ವಿಧಿಸಿದ್ದು, ದಂಡ ತುಂಬದ ಮೀನುಗಾರರಗೆ ಸಬ್ಸಿಡಿ ಆಧಾರದಲ್ಲಿ ನೀಡುವ ಡೀಸೆಲ್ ಸ್ಥಗಿತಗೊಳಿಸಿ, ಪರವಾನಿಗೆ ರದ್ದು ಮಾಡುವುದಾಗಿ ಎಚ್ಚರಿಕೆ ನೀಡಿದೆ.

ದೇವತೆಗಳಿಗೆ ಪೂಜೆ

ಮೀನುಗಾರಿಕೆಗೆ ತೆರಳುವ ಮೊದಲ ದಿನ ಸಂಪ್ರದಾಯದ ಪ್ರಕಾರ ಸ್ಥಳೀಯ ಸಮುದ್ರದ ನಡುಗಡ್ಡೆಯಲ್ಲಿರುವ ದೇವತೆಗಳಿಗೆ ಹರಕೆ ಹಾಗೂ ಪೂಜೆ ಸಲ್ಲಿಸಲಾಗುತ್ತದೆ. ಹೀಗಾಗಿ ಕಾರವಾರದಲ್ಲಿ ಕೂರ್ಮಗಡ್‌ದ ನರಸಿಂಹ ದೇವರಿಗೆ, ಬೇಲೇಕೇರಿ ಬಂದರಿನ ಸಮೀಪದ ಕುಕ್ಕುಡ ನಡುಗಡ್ಡೆಯಲ್ಲಿರುವ ದೇವರಿಗೆ, ಹೊನ್ನಾವರ ಮತ್ತು ಭಟ್ಕಳ ಭಾಗದ ಮೀನುಗಾರರು ನೇತ್ರಾಣಿ ದ್ವೀಪದಲ್ಲಿರುವ ದೇವತೆಗಳಿಗೆ ಹರಕೆ ತೀರಿಸಿ ಮೀನುಗಾರಿಕೆ ಚಟುವಟಿಕೆ ಪ್ರಾರಂಭಿಸುತ್ತಾರೆ. ಇದಲ್ಲದೇ ಕೆಲ ಮೀನುಗಾರ ಸಮುದಾಯದವರು ಶೃಂಗೇರಿ ಗುರುಗಳ ದರ್ಶನ ಪಡೆದು ಮೀನುಗಾರಿಕೆ ಆರಂಭಿಸುವುದೂ ಉತ್ತರ ಕನ್ನಡ ಜಿಲ್ಲೆಯ ಮೀನುಗಾರರ ವಾಡಿಕೆಯಾಗಿದೆ.

ಲೈಟ್ ಫಿಷಿಂಗ್ ನಡೆಸಿದ 102 ಬೋಟ್‌ಗಳಿಗೆ ದಂಡ

ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭವಾಗಲಿದ್ದು, ಕೆಲವು ಮೀನುಗಾರರು ಲಾಭದ ಆಸೆಗಾಗಿ ನಿಷೇಧವಿದ್ದರೂ ಲೈಟ್ ಪಿಷಿಂಗ್ ಮೀನುಗಾರಿಕೆ ನಡೆಸುವ ಮೂಲಕ ಇದೇ ಮೊದಲ ಬಾರಿಗೆ ಅತಿದೊಡ್ಡ ಮೊತ್ತದ ದಂಡ ಬರಿಸುವಂತಾಗಿದೆ. ಜಿಲ್ಲೆಯ ಕಾರವಾರದ 13, ಅಂಕೋಲಾದ 28, ಕುಮಟಾದ 27, ಹೊನ್ನಾವರದ 25, ಭಟ್ಕಳದ 9 ಬೋಟುಗಳು ಸೇರಿ ಒಟ್ಟು 102 ಬೋಟ್‌ಗಳಿಗೆ ತಲಾ 30 ಸಾವಿರದಂತೆ ದಂಡ ವಿಧಿಸಲಾಗಿದೆ. ಇನ್ನು ವಿಧಿಸಿದ ದಂಡವನ್ನು ಕಾರವಾರದಲ್ಲಿ ಕೇವಲ ಎರಡು ಬೋಟ್‌ಗಳು ಮಾತ್ರ ಭರಿಸಿವೆ. ಹೀಗಾಗಿ ದಂಡ ತುಂಬದ 100 ಬೋಟ್‌ಗಳ ಡೀಸೆಲ್ ಸಬ್ಸಿಡಿ ಕಡಿತಗೊಳಿಸುವುದರ ಜೊತೆಗೆ ಪರವಾನಿಗೆ ರದ್ದುಮಾಡಲು ಮೀನುಗಾರಿಕಾ ಇಲಾಖೆ ಮುಂದಾಗಿದೆ.

ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ಈಗಾಗಲೇ ಎಲ್ಲಾ ತಯಾರಿ ನಡೆದಿದೆ. ಪರ್ಷಿನ್ ಹಾಗೂ ಟ್ರಾಲರ್ ಬೋಟ್‌ಗಳ ಎಲ್ಲಾ ಮಾಲಕರು ಅವರಿಗೆ ಸೇರಿದ ಬೋಟ್‌ಗಳನ್ನು ಎಲ್ಲಾ ರೀತಿಯ ತಯಾರಿ ನಡೆಸಿದ್ದಾರೆ. ಹಿಂದಿನ ಬಾರಿ ಟ್ರಾಲ್ ಬೋಟ್‌ನವರು ಆದಾಯವಿಲ್ಲದೇ ಸಾಕಷ್ಟು ನಷ್ಟ ಅನುಭವಿಸಿದ್ದರು. ಪರ್ಷಿನ್ ಬೋಟ್‌ಗಳಿಗಿಂತಲೂ ಒಂದು ವಾರ ಮುಂಚಿತವಾಗಿ ಯಾಂತ್ರಿಕೃತ ಮೀನುಗಾರಿಕೆಗೆ ಅವಕಾಶ ನೀಡಬೇಕು.
-ಚೇತನ ಹರಿಕಂತ್ರ ಮೀನುಗಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News